ಇದೀಗ ಆ ಸಮಯ ಬಂದಿದೆ ಎಂದಿದ್ಯಾಕೆ ಅಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್..?
ಹಿಂದುಗಳ ಪವಿತ್ರ ಕ್ಷೇತ್ರ ತಿರುಪತಿಯ ತಿರುಮಲದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಹಾಗೂ ಪ್ರಾಣಿಗಳ ಕೊಬ್ಬು ಬಳಕೆ ಆಗುತ್ತಿರುವ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ರಾಷ್ಟ್ರಾದ್ಯಂತ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಆಂದ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ನಡೆದಿತ್ತೆನ್ನಲಾದ ಈ ಘನಘೋರ ಘಟನೆ ಸತ್ಯ ಎಂದು ಗುಜರಾತ್ನ ಪ್ರಯೋಗಾಲಯ ದೃಢಪಡಿಸಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಆಕ್ರೋಶ ಹೊರ ಹಾಕಿದ ಪವನ್ ಕಲ್ಯಾಣ್..!
ಕೊನೆಗೂ ಇದೀಗ ತಿರುಪತಿ ಲಡ್ಡು ವಿವಾದದ ಬಗ್ಗೆ ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರತಿಕ್ರಿಯೆ ನೀಡಿದ್ದಾರೆ. ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಕ್ಸ್ ಪೋಸ್ಟ್ಗೆ ಪವನ್ ಕಲ್ಯಾಣ್ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನ ಸಹ ಓದಿ: ಶಶಿಕುಮಾರ್ ಮಗನ ಹುಟ್ಟುಹಬ್ಬದಂದೇ 3ನೇ ಚಿತ್ರ “ರಾಶಿ” ಟೈಟಲ್ ಲಾಂಚ್..!
ಶ್ರೀ ವೆಂಕಟೇಶ್ವರ ಸ್ವಾಮಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿ ಕೊಬ್ಬು, ದನದ ಕೊಬ್ಬು) ಬೆರೆಸಿರುವುದು ಬೆಳಕಿಗೆ ಬಂದಿದ್ದು ಎಲ್ಲರ ಭಾವನೆಗಳಿಗೆ ಧಕ್ಕೆ ತಂದಿದೆ. ಹಲವು ಪ್ರಶ್ನೆಗಳಿಗೆ ವೈಎಸ್ಆರ್ಸಿಪಿ ಆಡಳಿತಾವಧಿಯಲ್ಲಿ ರಚನೆಯಾದ ಟಿಟಿಡಿ ಮಂಡಳಿಯೇ ಉತ್ತರ ನೀಡಬೇಕಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಭಾರತ ದೇಶದ ಎಲ್ಲ ದೇವಾಲಯಗಳ ವ್ಯವಹಾರಗಳ ಮೇಲ್ವಿಚಾರಣೆಗಾಗಿ ರಾಷ್ಟ್ರೀಯ ಮಟ್ಟದ ಸನಾತನ ಧರ್ಮರಕ್ಷಣಾ ಮಂಡಳಿಯನ್ನು ಸ್ಥಾಪಿಸುವ ಸಮಯ ಬಂದಿದೆ ಎಂದು ಪವನ್ ಕಲ್ಯಾಣ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಎಲ್ಲ ಸಮುದಾಯಗಳೊಂದಿಗೆ ರಾಷ್ಟ್ರಮಟ್ಟದ ಚರ್ಚೆಯಾಗಬೇಕು. ಸನಾತನ ಧರ್ಮಕ್ಕೆ ಯಾವುದೇ ಧಕ್ಕೆಯಾಗದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪವನ್ ಕಲ್ಯಾಣ್ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
Leave a Comment