ದೇಶ ಕಂಡ ಅಪ್ರತಿಮ ನಾಯಕ ಶಾಸ್ತ್ರಿಜೀ ಅವರ ಜನ್ಮ ದಿನ; ನಿಗೂಢವಾಗಿಯೇ ಉಳಿದ ಸಾವಿನ ರಹಸ್ಯ
ನ್ಯೂಸ್ ಆ್ಯರೋ: ಪ್ರತಿವರ್ಷ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಅಚರಣೆ ಮಾಡುವಂತೆ ನಾವು ಮತ್ತೊಬ್ಬರು ಶ್ರೇಷ್ಠ ಮುತ್ಸದ್ಧಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಣೆ ಮಾಡುತ್ತೇವೆ. ಅವರ ಜನ್ಮ ದಿನವು ಸಹ ಇದೇ ಅಕ್ಟೋಬರ್ 02 ರಂದು. ಲಾಲ್ ಬಹದ್ಧೂರ್ ಶಾಸ್ತ್ರಿ ಈ ದೇಶ ಕಂಡ ಅಪ್ರತಿಮ ನಾಯಕ. ಸಜ್ಜನ ನೇತಾರ.
ಗಾಂಧೀಜಿಯವರನ್ನು ನೆನೆಯುವಂತೆ, ಈ ದಿನದಂದು ನಾವು ಅವರ ಕೊಡುಗೆಗಳನ್ನು ಸಹ ನೆನೆಯುವ ದಿನವು ಹೌದು. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಅನುಯಾಯಿಯಾಗಿ ಅವರ ಕೊಡುಗೆಯು ಅಪಾರವಾಗಿದೆ. ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾಧ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ಧೂರ್ ಶಾಸ್ತ್ರಿ ಅವರು ಎಂದರೆ ತಪ್ಪಾಗಲಾರದು.
ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಇತಿಹಾಸ:
ಶಾಸ್ತ್ರಿ ಅವರು ಅಕ್ಟೋಬರ್ 2, 1904 ರಂದು ಉತ್ತರ ಪ್ರದೇಶದ ಮುಘಲ್ ಸರಾಯ್ ನಲ್ಲಿ ಜನಿಸಿದರು. ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಎತ್ತಿಹಿಡಿದ ನಾಯಕರಾಗಿದ್ದ ಶಾಸ್ತ್ರಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದರು. ಗಾಂಧಿ ಹುಟ್ಟಿ 35 ವರ್ಷಗಳ ಬಳಿಕ ಜನಿಸಿದ ಶಾಸ್ತ್ರಿ, ನಂತರದ ದಿನಗಳಲ್ಲಿ ಗಾಂಧೀಜಿ ಅವರ ಕಟ್ಟಾ ಅನುಯಾಯಿ ಆದರು. ಜವಾಹರಲಾಲ್ ನೆಹರು ನಂತರ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಮಹತ್ವ:
ಶಾಸ್ತ್ರಿ ಅವರು ಪ್ರತಿಪಾದಿಸಿದ ಸರಳತೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ನೆನಪಿಸಿಕೊಳ್ಳುವುದು ಮತ್ತು ಆಚರಿಸುವುದು ಈ ದಿನದ ಮಹತ್ವವಾಗಿದೆ. ಅವರು ಭ್ರಷ್ಟಾಚಾರರಹಿತ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದರು. ಅಲ್ಲದೆ ಶಾಸ್ತ್ರಿಜೀ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು, ವಿಶೇಷವಾಗಿ ಯುದ್ಧದ ಸಮಯದಲ್ಲಿ, ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವ ಅವರ ಸಂಕಲ್ಪವನ್ನು ಎತ್ತಿ ಹಿಡಿಯುತ್ತಿದ್ದವು.
ಲಾಲ್ ಬಹದ್ಧೂರ್ ಶಾಸ್ತ್ರಿ ಮೂಲತಃ ಉತ್ತರ ಪ್ರದೇಶದ ವಾರಣಾಸಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1904ರಂದು ಜನಿಸಿದರು. ಪುಟ್ಟ ಹಳ್ಳಿಯಲ್ಲಿ ಜನಿಸಿದ ಶಾಸ್ತ್ರೀಜಿ ಮುಂದೇ ದೇಶದ ಎರಡನೇ ಪ್ರಧಾನಿಯಾಗಿ ಸೇವೆಸಲ್ಲಿಸಿದರು. ಲಾಲ್ ಬಹದ್ಧೂರ್ ಶಾಸ್ತ್ರಿ ಅವರು ಒಂದೂವರೆ ವರ್ಷದಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡು, ತಾಯಿಯ ಮಡಿಲಲ್ಲೇ ಬೆಳೆದರು.
ಶಾಸ್ತ್ರಿ ವಿದ್ಯಾಭ್ಯಾಸವನ್ನು ವಾರಣಾಸಿಯಲ್ಲಿ ಪಡೆದರು. 16 ವರ್ಷದಲ್ಲಿದ್ದಾಗ ಗಾಂಧಿ ಅವರ ಕರೆಗೆ ಓಗಟ್ಟು ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡರು. ನಂತರ ವಾರಣಾಸಿಯ ಕಾಶಿ ವಿದ್ಯಾಪೀಠವನ್ನು ಸೇರಿದರು. ಶಾಸ್ತ್ರಿ ಅವರು ಕೇಂದ್ರ ಸರ್ಕಾರದ ಸಂಪುಟದಲ್ಲಿ ಹಲವು ಪ್ರಮುಖ ಇಲಾಖೆಗಳನ್ನು ನಿಭಾಯಿಸಿದವರು.
ರೈಲ್ವೆ, ಸಾರಿಗೆ ಮತ್ತು ಸಂವಹನ ಹಾಗೂ ವಾಣಿಜ್ಯ ಮತ್ತು ಉದ್ಯಮ ಇಲಾಖೆಗಳಂತಹ ಮಹತ್ವದ ಸಚಿವಾಲಯಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ದುರಾದೃಷ್ಟವಶಾತ್ ಶಾಸ್ತ್ರಿ ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ರೈಲು ದುರಂತವೊಂದು ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡರು. ಅದರ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿ ಆಗಿ ಆಡಳಿತ ನಡೆಸಿದ್ದು ಕೇವಲ 18 ತಿಂಗಳು ಮಾತ್ರ (1964ರ ಜೂನ್ ನಿಂದ 1966 ಜನವರಿ ವರೆಗೆ ). ಈ ಅಲ್ಪಾವಧಿಯಲ್ಲೇ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ದೇಶವನ್ನೂ ಮುನ್ನಡೆಸಿದರು. ದೇಶದಲ್ಲಿನ ಆಹಾರ ಕೊರತೆಯಯನ್ನು ನಿಭಾಯಿಸಿದರು. ಹಿಂದಿ, ಇಂಗ್ಲಿಷ್ ಭಾಷಾ ಗೊಂದಲವನ್ನು ಬಗೆಹರಿಸಿದರು. ಕಾಶ್ಮೀರದ ಹಜರತ್‌ಬಾಲ್‌ನಂತಹ ಸಮಸ್ಯೆಯನ್ನು ಹೂವೆತ್ತಿದಂತೆ ಪರಿಹರಿಸಿದ್ದರು.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಗಟ್ಟಿದನಿಯಲ್ಲಿ ಹೇಳಿದವರು ಇವರೇ. ಶಾಸ್ತ್ರೀಜಿ ಪ್ರಧಾನಿಯಾಗಿದ್ದಾಗ ನೆರೆಯ ಚೀನಾದ ಕ್ಯಾತೆಗೆ ಬಗ್ಗಲಿಲ್ಲ. ವಿಶ್ವಸಂಸ್ಥೆಯ ಒತ್ತಡಕ್ಕೂ ಮಣಿಯಲಿಲ್ಲ. ಅಮೆರಿಕದ ಬೆದರಿಕೆಗೆ ಕ್ಯಾರೇ ಎನ್ನಲಿಲ್ಲ. ಕೊನೆಗೆ ಶಾಂತಿ ಮಂತ್ರ ಜಪಿಸುತ್ತಲೇ ತಾಷ್ಕೆಂಟಿಗೆ ಹೋಗಿ ಅಲ್ಲಿ ತಮ್ಮ ಜೀವವನ್ನೇ ಬಲಿಕೊಟ್ಟರು.
‘ಶಾಸ್ತ್ರೀ’ಅವರು ಸಾವಿಗೆ ಕಾರಣವೇನು?
ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ವಿದೇಶದ ಮಣ್ಣಿನಲ್ಲಿ ಸಾವಿಗೀಡಾಗಿದ್ದರು. ಆದರೆ, ಅವರ ಸಾವು ಈಗಲೂ ಅದೇ ನಿಗೂಢತೆಯಲ್ಲಿದೆ.
ಶಾಸ್ತ್ರಿ ಅವರು ನಿಧನರಾಗಿದ್ದು 1966ರ ಜನವರಿ 11ರಂದು. ಪಾಕಿಸ್ತಾನದ ಅಧ್ಯಕ್ಷ ಜನರಲ್ ಅಯೂಬ್ ಖಾನ್ ಜತೆಗಿನ ಮಾತುಕತೆಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಾಷ್ಕೆಂಟ್(ಈ ಹಿಂದೆ ಯುಎಸ್‌ಎಸ್‌ಆರ್‌ನ ಭಾಗವಾಗಿತ್ತು)ಗೆ ಹೋಗಿದ್ದರು. ಈ ವೇಳೆ ಅವರು ಐತಿಹಾಸಿಕ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಅನ್ವಯ, 1965ರ ಪಾಕಿಸ್ತಾನದ ಯುದ್ಧದ ವೇಳೆ ವಶಪಡಿಸಿಕೊಳ್ಳಲಾಗಿದ್ದ ಆಯಕಟ್ಟಿನ ಜಾಗಗಳಾದ ಹಾಜಿ ಪಿರ್‌ಪಾಸ್ ಮತ್ತು ಟಿಟ್ವಾಲ್‌ನಿಂದ ಭಾರತೀಯ ಸೇನೆ ಹಿಂದೆ ಸರಿದು, ಆ ಜಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು.
ಪ್ರಧಾನಿ ಶಾಸ್ತ್ರಿ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಅವರ ವಿರುದ್ಧ ವ್ಯಾಪಕ ಟೀಕೆ ಕೇಳಿಬಂತು. ಇದರಿಂದ ಅವರ ಆರೋಗ್ಯ ಹದಗೆಟ್ಟಿತು ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ದಿನದ ರಾತ್ರಿಯೇ ಅವರು ನಿಧನರಾದರು. ಅವರ ನಿಧನಕ್ಕೆ ಹೃದಯಾಘಾತ ಕಾರಣ ಎಂದು ಈಗಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ, ಅವರ ಸಾವಿನ ಸಂದರ್ಭ ಮತ್ತು ಪರಿಸ್ಥಿತಿ ಮಾತ್ರ ಇಂದಿಗೂ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ.
ನಿಧನರಾದ ಪ್ರಧಾನಿಯ ಮರಣೋತ್ತರ ಪರೀಕ್ಷೆ ಭಾರತದಲ್ಲಿ ಅಥವಾ ಯುಎಸ್‌ಎಸ್‌ಆರ್‌ನಲ್ಲಿ ನಡೆಯಲೇ ಇಲ್ಲ. ಮರಣೋತ್ತರ ಪರೀಕ್ಷೆ ನಡೆಸುವಂತೆ ಭಾರತ ಸರಕಾರವು ರಷ್ಯನ್ ಸರಕಾರಕ್ಕೆ ಮನವಿ ಮಾಡಿತಾದರೂ ಪರೀಕ್ಷೆ ಮಾತ್ರ ನಡೆಯಲೇ ಇಲ್ಲ. ಆರ್‌ಟಿಐನಡಿ ಕೇಳಿದ ನನ್ನ ಪ್ರಶ್ನೆಗೆ ಉತ್ತರ ನೀಡಿದ ವಿದೇಶಾಂಗ ಇಲಾಖೆ, ”ಪ್ರಧಾನಿ ಶಾಸ್ತ್ರಿ ಅವರ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿ ತನ್ನ ಬಳಿ ಇಲ್ಲ,” ಎಂದು ಹೇಳಿಕೊಂಡಿದೆ.
ಇನ್ನು ಸಾಮಾನ್ಯ ಮನುಷ್ಯನೊಬ್ಬ ಅಸಹಜ ಪರಿಸ್ಥಿತಿಯಲ್ಲಿ ಸಾವಿಗೀಡಾದರೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಅವರು(ಶಾಸ್ತ್ರಿ) ಪ್ರಧಾನಿಯಾಗಿದ್ದರೂ ಯಾವುದನ್ನೂ ಮಾಡಲಿಲ್ಲ,” ಎನ್ನುತ್ತಾರೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹಿರಿಯ ಮೊಮ್ಮಗ ಸಂಜಯನಾಥ್ ಸಿಂಗ್ ಅವರು.
ಶಾಸ್ತ್ರಿ ಅವರ ಶವವನ್ನು ತಾಯ್ನಾಡಿಗೆ ತಂದಾಗ, ಅವರ ತಾಯಿ ರಾಮದುಲಾರಿ ದೇವಿ ಅವರು, ಶಾಸ್ತ್ರಿ ಅವರ ಮುಖ ನೀಲಿಗಟ್ಟಿದ್ದು ಮತ್ತು ಬಿಳಿಯ ಕಲೆಗಳನ್ನು ಗಮನಿಸಿ, ‘ಮೇರೆ ಬಿಟ್ವಾ ಕೋ ಝೆಹರ ದೇ ದಿಯಾ(ನನ್ನ ಮಗನಿಗೆ ವಿಷ ಕೊಡಲಾಗಿದೆ)’ ಎಂದು ಅಳತೊಡಗಿದರು. ಹಾಗೆಯೇ, ಲಲಿತಾ ಶಾಸ್ತ್ರಿ ಅವರು ಪ್ರಧಾನಿ ಶವ ನೋಡಿದ ತಕ್ಷಣ, ಇಡೀ ಶರೀರ ನೀಲಿಗಟ್ಟಿದ್ದನ್ನು ಗಮನಿಸಿದರು. ”ನಾನು ಲಲಿತಾ ಶಾಸ್ತ್ರಿ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು, ‘ನೀನು ಎಲ್ಲಿದ್ದೆ? ಅವರಿಗೆ ವಿಷ ಉಣಿಸಲಾಗಿದೆ’ ಎಂದರು. ‘ನಿಮಗೆ ಹೇಗೆ ಗೊತ್ತು’ ಎಂದು ನಾನು ಕೇಳಿದೆ. ‘ಅವರ ಶರೀರ ಪೂರ್ತಿ ನೀಲಿಗಟ್ಟಿದೆ, ಕಾಣೋದಿಲ್ಲವಾ ನಿನಗೆ’ ಎಂದರು,” ಎಂದು ಶಾಸ್ತ್ರಿ ಅವರ ಗೆಳೆಯ ಹಾಗೂ ತಾಷ್ಕೆಂಟ್ ಪ್ರವಾಸಕ್ಕೆ ಪ್ರಧಾನಿ ಜತೆಗೆ ತೆರಳಿದ್ದ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಹೇಳಿದರು.
ಅವರ ಶವವನ್ನು ಭಾರತಕ್ಕೆ ತಂದಾಗ, ಎದೆಯವರೆಗಿನ ಭಾಗ ನೀಲಿಯಾಗಿತ್ತು ಮತ್ತು ಬಿಳಿಯ ಕಲೆಗಳಿದ್ದವು. ಉಳಿದ ಶರೀರದ ಭಾಗವನ್ನು ಮುಚ್ಚಲಾಗಿತ್ತು. ಈ ಬಗ್ಗೆ ಪ್ರತಿಯೊಬ್ಬರಿಗೆ ಅನುಮಾನಗಳಿದ್ದವು. ಅಂದಿನ ಹಂಗಾಮಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಹಾಗೂ ನಂತರ ಪ್ರಧಾನಿಯಾದ ಇಂದಿರಾ ಗಾಂಧಿ ಅವರಿಗೂ ಶಾಸ್ತ್ರಿಯವರ ಮರಣೋತ್ತರ ಪರೀಕ್ಷೆ ನಡೆಸುವಂತೆ ನನ್ನ ತಾಯಿ ವಿನಂತಿಸಿಕೊಂಡರು. ಆದರೆ ಅವರೇನೂ ಮಾಡಲೇ ಇಲ್ಲ. ಅದು ಸಹಜ ಸಾವಾಗಿರಲಿಲ್ಲ. ಅದರಲ್ಲೇನೋ ಸಂಚು ಇದೆ. ಹೊಟ್ಟೆಯ ಎರಡು ಬದಿಗೆ ಕತ್ತರಿಸಿದ ಗುರುತುಗಳು ಯಾಕೆ ಇದ್ದವು ಎಂದು ಪ್ರಶ್ನಿಸಿದಾಗ, ಹೊಟ್ಟೆಯನ್ನು ಸ್ವಚ್ಛಗೊಳಿಸಲಾಗಿತ್ತು ಎಂದರು. ಹೀಗೆ ಆನೇಕ ಅನುಮಾನಗಳಿಗೆ ಶಾಸ್ತ್ರಿ ಅವರ ಸಾವು ಎಡೆ ಮಾಡಿಕೊಟ್ಟಿದೆ. ಆದರೆ ಈವರೆಗೂ ಇದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.
Leave a Comment