ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.7ರಂದು ಮಹಾರಥೋತ್ಸವ; ಪೂಜಾ ಸೇವೆ, ಉತ್ಸವಾದಿಗಳ ವಿವರ ಹೀಗಿದೆ
ನ್ಯೂಸ್ ಆ್ಯರೋ: ಇತಿಹಾಸ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿಗೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಚಂಪಾಷಷ್ಠಿ ಹಿನ್ನೆಲೆಯಲ್ಲಿ ನವೆಂಬರ್ 27ರಿಂದ ಡಿ.12ರವರೆಗೆ ವಿವಿಧ ಪೂಜಾ ಸೇವೆಗಳು, ಜಾತ್ರಾ ಉತ್ಸವಾದಿಗಳು ನಡೆಯಲಿದೆ.
ಭಗವತ್ಸಂಕಲ್ಪ ಪ್ರಕಾರ ನಡೆಯುವ ಮಹೋತ್ಸವಗಳಿಗೆ ಭಕ್ತರು ಆಗಮಿಸಿ, ಶ್ರೀ ದೇವರ ಮೂಲ ಮೃತ್ತಿಕಾ ಗಂಧ-ಪ್ರಸಾದವನ್ನು ಸ್ವೀಕರಿಸಿ, ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದೆ. 27-11-2024ರಿಂದ 30-11-20240 ವರೆಗೂ ಹಸಿರು ಕಾಣಿಕೆಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ತಿಳಿಸಿದೆ.
ಡಿಸೆಂಬರ್ 7ರಂದು ದೇವರ ಮಹಾರಥೋತ್ಸವ ನಡೆಯಲಿದೆ. ಸಾಮಾನ್ಯವಾಗಿ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ದೇಗುಲಗಳಲ್ಲೆಲ್ಲ ವಿಶೇಷ ಪೂಜೆಗಳು ನಡೆಯುತ್ತವೆ. ಅಷ್ಟೇ ಅಲ್ಲ, ಅಶ್ವತ್ಥ ಕಟ್ಟೆಯಲ್ಲಿ ಸರ್ಪಾಕಾರದ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಆವಾಹನೆ ಮಾಡಿ, ಹಾಲೆರೆದು ಅಭಿಷೇಕ ಹಾಗೂ ಪಾಯಸದ ನೈವೇದ್ಯ ಅರ್ಪಿಸಲಾಗುತ್ತದೆ. ಜೊತೆಗೆ, ಅಂದು ಉಪವಾಸ ವೃತವನ್ನೂ ಆಚರಿಸಲಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಲ್ಮೀಖ ಅರ್ಥಾತ್ ಹುತ್ತವು ಇಲ್ಲಿನ ಆರಾಧ್ಯ ದೈವ. ಅಲ್ಲಿಂದ ತೆಗೆದ ಮಣ್ಣು ಅಥವಾ ಮೃತಿಕಾ ಪ್ರಸಾದವೂ ಅತ್ಯಮೂಲ್ಯ ಪ್ರಸಾದವಾಗಿದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ಪಾಪ ಕಳೆದು ಕೊಳ್ಳುತ್ತಾರೆ ಎಂಬುದು ಐತಿಹ್ಯ. ಚಂಪಾಷಷ್ಠಿಯ ದಿನ ಕುಮಾರಧಾರಾ ನದಿಗೆ ವಿಶೇಷ ದೇವರ ಮೀನುಗಳ ಆಗಮಿಸುುವುದು ಇಲ್ಲಿನ ಇನ್ನೊಂದು ವಿಶೇಷತೆ. ಇಲ್ಲಿನ ಮಲೆಕುಡಿಯ ಜನಾಂಗದವರು ರಚಿಸುವ ಜಾತ್ರಾ ತೇರು ರಚನೆ ಸೇರಿದಂತೆ ಪ್ರತಿಯೊಂದಕ್ಕೂ ಕೂಡ ಅದರದ್ದೇ ಆದ ವಿಶೇಷತೆಗಳಿವೆ.
- ನವೆಂಬರ್ 26 – ಮೂಲಮೃತ್ತಿಕಾ ಪ್ರಸಾದ ವಿತರಣೆ
- ನ.27 – ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ
- ನ.30 – ಲಕ್ಷದೀಪೋತ್ಸವ
- ಡಿಸೆಂಬರ್.01 – ರಾತ್ರಿ ಶೇಷವಾಹನೋತ್ಸವ
- ಡಿ.02 – ರಾತ್ರಿ ಅಶ್ವವಾಹನೋತ್ಸವ
- ಡಿ.03 – ರಾತ್ರಿ ಮಯೂರ ವಾಹನೋತ್ಸವ
- ಡಿ.04 – ರಾತ್ರಿ ಶೇಷವಾಹನೋತ್ಸವ
- ಡಿ.05 – ಹೂವಿನತೇರಿನ ಉತ್ಸವ
- ಡಿ.06 – ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ
- ಡಿ.07 – ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ
- ಡಿ.08 – ಶ್ರೀ ದೇವರ ಅವಭ್ರತೋತ್ಸವ, ನೌಕಾವಿಹಾರ
- ಡಿ.12 – ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ
- 05-01-2025 – ಕಿರುಷಷ್ಠಿ ಮಹೋತ್ಸವ
ಸೇವೆಗಳ ವಿವರ: ಮಹಾರಥೋತ್ಸವ, ಚಿಕ್ಕ ರಥೋತ್ಸವ, ಚಂದ್ರಮಂಡಲ ಉತ್ಸವ, ಹೂವಿನ ತೇರಿನ ಉತ್ಸವ, ಬಂಡಿ ಉತ್ಸವ, ಮಹಾಭಿಷೇಕ, ದೀಪಾರಾಧನೆ ಪಾಲಕಿ ಉತ್ಸವ, ಮಹಾಪೂಜೆ ಪಾಲಕಿ ಉತ್ಸವ, ಸಪರಿವಾರ ಸೇವಾ, ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಮಹಾಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಶೇಷ ಸೇವೆ, ಹರಿವಾಣ ನೈವೇದ್ಯ, ಕಾರ್ತಿಕ ಪೂಜೆ ಸೇವೆಗಳು ನಡೆಯಲಿವೆ.
Leave a Comment