Mangalore : ಬಿಜೈಯಿಂದ ನಾಪತ್ತೆಯಾಗಿದ್ದ ಹುಡುಗಿ ಕಾರ್ಕಳದಲ್ಲಿ ಪತ್ತೆ – Instagram ನಲ್ಲಿ ಆದ ಯುವಕನ ಪರಿಚಯ ಮನೆ ಬಿಡುವಂತೆ ಮಾಡಿದ್ದು ಹೇಗೆ?
ನ್ಯೂಸ್ ಆ್ಯರೋ : ಕಳೆದ ಜುಲೈ 30ರಂದು ಮಂಗಳೂರು ನಗರದ ಬಿಜೈಯ ಮನೆಯಿಂದ ನಾಪತ್ತೆಯಾಗಿದ್ದ ಹುಡುಗಿಯೊಬ್ಬಳ ನಾಪತ್ತೆ ಪ್ರಕರಣವನ್ನು ಮಂಗಳೂರಿನ ಬರ್ಕೆ ಪೋಲಿಸರು ಭೇದಿಸಿದ್ದು ಕಾರ್ಕಳ ಮೂಲದ ಯುವಕನ ಮನೆಯಲ್ಲಿ ನಾಪತ್ತೆಯಾಗಿದ್ದ ಹುಡುಗಿಯನ್ನು ಪತ್ತೆ ಹಚ್ಚಿದ್ದಾರೆ.
ಕ್ಯಾಲಿಸ್ತಾ ಫೆರ್ರಾವೋ (18) ಎಂಬಾಕೆ ನಾಪತ್ತೆಯಾಗಿದ್ದ ಬಗ್ಗೆ ಬರ್ಕೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗಿಳಿದ ಪೋಲಿಸರು ಆಕೆ ಬಳಸುತ್ತಿದ್ದ ಇನ್ಸ್ಟಾಗ್ರಾಮ್ ಅಕೌಂಟ್ ಮತ್ತು Moj ಆ್ಯಪ್ ಗಳ ಅಕೌಂಟ್ ಪರಿಶೀಲಿಸಿದಾಗ ನಾಪತ್ತೆಗೆ ಕಾರಣ ಬಯಲಾಗಿದೆ.
ನಾಪತ್ತೆಯಾಗಿದ್ದ ಕ್ಯಾಲಿಸ್ತಾ ಫೆರ್ರಾವೋ ಳಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗಜೇಂದ್ರ ಬೈಲ್ ನಿವಾಸಿ ಸೂರಜ್ ಪೂಜಾರಿ (23) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು, ಬಳಿಕ ಆತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು.
ಕಳೆದ ಜುಲೈ 30 ರಂದು ಮನೆಯಿಂದ ನಾಪತ್ತೆಯಾಗಿದ್ದ ಕ್ಯಾಲಿಸ್ತಾ ಸೀದಾ ಪ್ರಿಯಕರನ ಮನೆಗೆ ತೆರಳಿದ್ದಳು ಎನ್ನಲಾಗಿದೆ. ಪೋಲಿಸರ ತನಿಖೆ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದ್ದು, ಪೋಲಿಸರು ಸೂರಜ್ ಪೂಜಾರಿ ಮನೆಗೆ ಭೇಟಿ ನೀಡಿದಾಗ ನಾಪತ್ತೆಯಾಗಿದ್ದ ಹುಡುಗಿ ಆತನ ಮನೆಯಲ್ಲಿ ಸಿಕ್ಕದ್ದಾಳೆ. ಇಬ್ಬರನ್ನೂ ಬರ್ಕೆ ಠಾಣೆಗೆ ಕರೆತಂದು ವಿಚಾರಿಸುವ ವೇಳೆ ಈ ಪ್ರೀತಿಯ ವಿಚಾರ ಬೆಳಕಿಗೆ ಬಂದಿದೆ.
ಆದರೆ ವಿಚಾರಣೆ ವೇಳೆ ನಾಪತ್ತೆಯಾಗಿದ್ದ ಹುಡುಗಿ ಮಾನಸಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥವಿಲ್ಲದಿರುವುದು ವಿಚಾರಣಾಧಿಕಾರಿಯ ಗಮನಕ್ಕೆ ಬಂದಿದ್ದು, ಹುಡುಗಿ ಸದ್ಯ ತಂದೆ ತಾಯಿಯ ಜೊತೆ ಹೋಗುವುದಿಲ್ಲ ಎಂದು ತಿಳಿಸಿರುವ ಕಾರಣ ಆಕೆಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಲಾಗಿದೆ.
ಮಕ್ಕಳ ಬಗ್ಗೆ ಪೋಷಕರು ನಿಗಾವಹಿಸಬೇಕಾದ ಅಗತ್ಯ..
ಹದಿಹರೆಯದಲ್ಲೇ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಅಪ್ರಾಪ್ತ ಮಕ್ಕಳು ಪ್ರೀತಿಯ ಬಲೆಯಲ್ಲಿ ಬೀಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೋವಿಡ್ ಬಳಿಕ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಆನ್ ಲೈನ್ ತರಗತಿಗೆಂದು ತೆಗೆದುಕೊಟ್ಟ ಹೊಸ ಮೊಬೈಲ್ ಫೋನ್, ಕಾಲೇಜು ದೂರವಿದೆ ಬರಲು ತಡವಾಗುತ್ತದೆ ಎಂಬ ಕಾರಣಕ್ಕೆ ಕೊಟ್ಟ ಫೋನ್, ಮಕ್ಕಳಿಗೆ ಹೆಚ್ಚು ಬೆಲೆಯ ಫೋನ್ ಕೊಡಿಸಿದರೆ ಸ್ಟೇಟಸ್ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ ಕೊಡಿಸುವ ಫೋನ್, ರೀಲ್ಸ್ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಲಿ ಎಂಬ ಕಾರಣಗಳಿಂದ ಪೋಷಕರ ಸ್ಟೇಟಸ್ ಮಣ್ಣುಪಾಲಾಗುವ ಅಪಾಯ ಹೆಚ್ಚಾಗಿದೆ. ಮಕ್ಕಳಿಗೆ ಮೊಬೈಲ್ ಕೊಡಿಸಿದ ಬಳಿಕ ದಿನಕ್ಕೊಮ್ಮೆಯಾದರೂ ಅದರ ಬಗ್ಗೆ ಗಮನ ಕೊಡದಿರುವ ಪೋಷಕರು ಇನ್ನಾದರೂ ಎಚ್ಚೆತ್ತಕೊಳ್ಳಲಿ ಎಂಬುದು ನಮ್ಮ ಸಾಮಾಜಿಕ ಕಳಕಳಿ.
Leave a Comment