Karkala : ಪರಶುರಾಮ ಥೀಂ ಪಾರ್ಕ್ ಹಗರಣದಲ್ಲಿ ಮೊದಲ ವಿಕೆಟ್ ಪತನ – ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅಮಾನತು
ನ್ಯೂಸ್ ಆ್ಯರೋ : ರಾಜ್ಯಾದ್ಯಂತ ಭಾರೀ ಸುದ್ದಿಯಾಗಿರುವ, ಹಿಂದುತ್ವದ ಭಾವನೆಗಳಿಗೆ ಧಕ್ಕೆಯಾದ ಯರ್ಲಪಾಡಿ ಗ್ರಾಮದ ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯನ್ನು ಪೂರ್ಣಗೊಳಿಸದೇ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರ ಮಾಡದೇ ಇರುವುದರಿಂದ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್‌ರನ್ನು ಜಿಲ್ಲಾಧಿಕಾರಿಯವರು ಅಮಾನತು ಮಾಡಿ ಆದೇಶಿಸಿದ್ದು, ಇದರೊಂದಿಗೆ ಪರಶುರಾಮ ಥೀಮ್ ಪಾರ್ಕ್ ಪ್ರಕರಣದಲ್ಲಿ ಮೊದಲ ವಿಕೆಟ್ ಪತನವಾಗಿದೆ.
ಪರಶುರಾಮ ಕಾಮಗಾರಿಗೆ ಅಂದಾಜು ಮೊತ್ತ 11.5 ಕೋಟಿಗೆ ಆಡಳಿತಾತ್ಮಕವಾಗಿ ಮಂಜೂರುಗೊಂಡಿದ್ದು ಈ ಪೈಕಿ ರೂ. 6.72ಕೋಟಿ ಬಿಡುಗಡೆಯಾಗಿತ್ತು. ಈ ಕಾಮಗಾರಿಯನ್ನು ಪೂರ್ಣಗೊಳಿಸದೇ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರ ಮಾಡದೇ ಉದ್ಘಾಟನಾ ಕಾರ್ಯಕ್ರಮ ಮಾಡಿರುವುದರಿಂದ ನಿರ್ಮಾಣದ ಗುಣಮಟ್ಟ ಹಾಗೂ ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ವಿವಿಧ ಪತ್ರಿಕೆ, ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
ಈ ಕಾಮಗಾರಿಯ ಬಗ್ಗೆ ಪೊಲೀಸ್ ಇಲಾಖೆ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್‌ದಾಸ್ ವಿಚರಣಾ ಆಯೋಗದಲ್ಲಿ ತನಿಖಾ ಹಂತದಲ್ಲಿದ್ದು ಹಾಗೂ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುತ್ತದೆ.
ತನಿಖೆಗೆ ಅಡ್ಡಿ ಉಂಟುಮಾಡುವ ಅಥವಾ ತನಿಖೆ ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿರುವುದರಿಂದ ಅರುಣ್ ಕುಮಾರ್‌ರನ್ನು ಕರ್ತವ್ಯದಿಂದ ಅಮಾನತು ಮಾಡಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.
Leave a Comment