
ಉಡುಪಿಯ ಪ್ರವಾಸಿ ತಾಣಗಳಿಗೆ ದಿಢೀರ್ ನಿರ್ಬಂಧ – ಜಿಲ್ಲಾಧಿಕಾರಿ ಆದೇಶಕ್ಕೆ ಕಾರಣವೇನು ಗೊತ್ತಾ?
- ಕರಾವಳಿ
- September 6, 2023
- No Comment
- 159
ನ್ಯೂಸ್ ಆ್ಯರೋ : ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಉಡುಪಿ ಜಿಲ್ಲೆಯ ಕೆಲವು ಸ್ಥಳಗಳನ್ನು ಮರೆಯುವಂತಿಲ್ಲ. ಧಾರ್ಮಿಕ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕರಾವಳಿ ತೀರದ ಉಡುಪಿ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಆದರೆ ಇದೀಗ ಉಡುಪಿಯ ಪ್ರಮುಖ ಪ್ರವಾಸಿ ತಾಣಗಳ ಭೇಟಿಗೆ ಸೆಪ್ಟೆಂಬರ್ 15ರ ವರೆಗೆ ಅಲ್ಲಿನ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ. ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?
ಜಿಲ್ಲಾಧಿಕಾರಿ ಹೇಳಿದ್ದೇನು?
ಈ ದಿಢೀರ್ ನಿರ್ಬಂಧದ ಬಗ್ಗೆ ಮಾತನಾಡಿರುವ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ‘ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಸ್ತರಣೆ ಬಗ್ಗೆ ಅಧಿಕಾರಿಗಳೊಂದಿಗೂ ಚರ್ಚಿಸುತ್ತೇವೆ. ಜೊತೆಗೆ, ಆಗುಂಬೆ ಘಾಟ್‌ನಲ್ಲಿ ವಾಹನ ಸಂಚಾರ ನಿರ್ಬಂಧ ಹಿಂತೆಗೆದುಕೊಳ್ಳುವ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಮಾತು ಮುಂದುವರೆಸಿದ ಜಿಲ್ಲಾಧಿಕಾರಿಗಳು, ‘ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಮೇಲಿರುವ ಎಲ್ಲಾ ತಾತ್ಕಾಲಿಕ ನಿರ್ಬಂಧಗಳು ಸೆಪ್ಟೆಂಬರ್ 15 ರವರೆಗೆ ಮುಂದುವರಿಯುತ್ತವೆ. ಅದರ ನಂತರ ನಾವು ಆ ಸಮಯದಲ್ಲಿ ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಯನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಂಡು ಪ್ರವಾಸಿಗರಿಗೆ ಅನುವು ಮಾಡಿ ಕೊಡುತ್ತೇವೆ’ ಎಂದಿದ್ದಾರೆ.
ನಿರ್ಬಂಧಕ್ಕೆ ಕಾರಣವೇನು?
ಇತ್ತೀಚೆಗಷ್ಟೇ, ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣಕ್ಕೆ ಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತದಲ್ಲಿ ನಡೆದಿತ್ತು. ಇಂತಹ ಕೆಲವು ಘಟನೆಗಳ ನಂತರ ಎಚ್ಚೆತ್ತುಕೊಂಡಿರುವ ಉಡುಪಿ ಜಿಲ್ಲಾಡಳಿತ ಕಡಲತೀರಗಳು ಮತ್ತು ಇತರ ಅಪಾಯದ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುವುದಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಈ ಆದೇಶ ಸೆಪ್ಟೆಂಬರ್ 15ರ ವರೆಗೆ ಮುಂದುವರೆಯಲಿದೆ.