
ನೆಲ್ಯಾಡಿ : ರಿಯಲ್ KGF ಸ್ಟೋರಿ, ರಸ್ತೆ ಬದಿ ನಿಂತ ಲಾರಿಗೆ ಬಟ್ಟೆ ಕಟ್ಟಿ ಮಗುವಿಗೆ ಲಾಲಿ ಹಾಡು – ವೈರಲ್ ಆಯ್ತು ತಾಯಿ ಪ್ರೀತಿ ಸಾರುವ ಮನ ಮಿಡಿಯುವ ದೃಶ್ಯ..!!
- ಕರಾವಳಿ
- August 25, 2023
- No Comment
- 245
ನ್ಯೂಸ್ ಆ್ಯರೋ : ತಾಯಿ ಪ್ರೀತಿಗೆ ಕೊನೆಯಿಲ್ಲ. ಎಷ್ಟೇ ಕಷ್ಟ ಎದುರಾದರೂ ಅದನ್ನೆಲ್ಲ ನುಂಗಿ ಮಕ್ಕಳ ಏಳಿಗೆಗೆ ಶ್ರಮಿಸುವವಳೇ ತಾಯಿ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ‘ಕೆ.ಜಿ.ಎಫ್.’ ಚಿತ್ರದಲ್ಲಿ ದೃಶ್ಯವೊಂದಿದೆ. ಅಲೆಮಾರಿ ತಾಯೊಬ್ಬಳು ಚಿಕ್ಕ ಮಗುವನ್ನು ಕಂಕುಳಲ್ಲಿ ಕರೆದುಕೊಂಡು ಹೋಗುವಾಗ ರಸ್ತೆ ಮಧ್ಯೆ ಬನ್ ಬೀಳುತ್ತದೆ. ವಾಹನ ಓಡಾಡುತ್ತಿರುವುದನ್ನು ಲೆಕ್ಕಿಸದೇ ಮಗುವಿಗಾಗಿ ಬನ್ ಎತ್ತಿಕೊಳ್ಳಲು ಆಕೆ ಮುಂದಾಗುತ್ತಾಳೆ. ಈ ದೃಶ್ಯ ಎಲ್ಲರ ಮನ ಕಲುಕಿತ್ತು.
ವೈರಲ್ ಆದ ದೃಶ್ಯ
ಇದು ರೀಲ್ ನ ಕಥೆಯಾಯಿತು. ಸದ್ಯ ತಾಯಿಯ ಮಮತೆ ಸಾರುವ ರಿಯಲ್ ದೃಶ್ಯವೊಂದು ಈಗ ವೈರಲ್ ಆಗಿದೆ. ತಾನು ಮಾಡುವ ಕೂಲಿ ಕೆಲಸದ ಮಧ್ಯೆಯೂ ಮಗುವಿಗಾಗಿ ಮಿಡಿಯುವ ತಾಯಿಯ ಜೀವವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ವೀಡಿಯೋದಲ್ಲೇನಿದೆ?
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಸೆರೆಯಾದ ವೀಡಿಯೋ ಮನ ಮಿಡಿಯುವಂತಿದೆ. ಮಂಗಳೂರು – ಬೆಂಗಳೂರು ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಡಿವೈಡರ್ ನಲ್ಲಿ ಗಿಡ ನೆಡಲಾಗುತ್ತಿದೆ.
ಈ ಕೆಲಸ ನಿರ್ವಹಿಸುವ ಕೂಲಿ ಕೆಲಸದ ಮಹಿಳೆಯೊಬ್ಬರು ರಸ್ತೆಯಲ್ಲಿ ನಿಂತಿರುವ ಟಿಪ್ಪರ್ ಗೆ ಬಟ್ಟೆ ಕಟ್ಟಿ ತನ್ನ ಮಗುವನ್ನು ತೂಗುತ್ತಿದ್ದಾರೆ. ಕೆಲಸದ ಬ್ಯುಸಿ ಮಧ್ಯೆಯೂ ಮಗುವಿನ ಆರೈಕೆ ಮರೆಯದ ತಾಯಿಯ ಪ್ರೀತಿ ಸಾರುವ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಾಮಾನ್ಯವಾಗಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಮುಂತಾದ ಶ್ರಮ ಬೇಡುವ ಕೆಲಸಗಳನ್ನು ಅಲೆಮಾರಿಗಳು ನಿರ್ವಹಿಸುತ್ತಾರೆ. ಕೆಲಸ ನಡೆಯುವ ಸ್ಥಳಗಳಲ್ಲಿ ಟೆಂಟ್ ಹಾಕಿ ವಾಸ ಮಾಡುವ ಅವರ ಮಕ್ಕಳಿಗೆ ಸೂಕ್ತ ಆರೈಕೆ ದೊರೆಯುವುದಿಲ್ಲ. ಆದರೂ ತಾಯಂದಿರು ತಮ್ಮ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಶಕ್ತಿ ಮೀರಿ ಶ್ರಮಿಸುತ್ತಾರೆ. ಈ ವಿಡಿಯೋ ಕೂಡ ಬಡತನದ ಬೇಗೆಯಲ್ಲೂ ಮಗು ಮೇಲಿನ ತಾಯಿಯ ಮಮಕಾರವನ್ನು ತೆರೆದಿಟ್ಟಿದೆ.