
ಉಡುಪಿ : ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣ – ವಿಶೇಷ ಐದು ಪೋಲಿಸ್ ತಂಡ ರಚನೆ ; ಪ್ರತ್ಯೇಕ ಮಸೀದಿಗಳಲ್ಲಿ ನಾಲ್ವರು ಮೃತರ ಅಂತಿಮ ಸಂಸ್ಕಾರ
- ಕರಾವಳಿ
- November 13, 2023
- No Comment
- 126
ನ್ಯೂಸ್ ಆ್ಯರೋ : ರಾಜ್ಯದಾದ್ಯಂತ ಹಬ್ಬದ ಸಂಭ್ರಮ. ಕರಾವಳಿ ತೀರ ಉಡುಪಿಯಲ್ಲೂ ಹಬ್ಬದ ಛಾಯೆ ಕಳೆಕಟ್ಟಿತ್ತು. ಆದರೆ ಹಬ್ಬದ ದಿನವೇ ರಜೆಯ ಸಂಭ್ರಮದಲ್ಲಿದ್ದ ಗಗನಸಖಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ನಡೆದಿದ್ದು, ಇಡೀ ಉಡುಪಿ ಜಿಲ್ಲೆಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗಿದೆ.
ಹಾಡು ಹಗಲೇ ನಡೆದ ಈ ಅಮಾನುಷ ಕೃತ್ಯಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಉಡುಪಿ ತಾಲೂಕಿನ ಮಲ್ಪೆಯ ಕೆಮ್ಮಣ್ಣು ನೇಜಾರಿನ ನಿವಾಸಿಗಳಾದ ಹಸಿನಾ(48) ಮಕ್ಕಳಾದ ಅಫ್ನಾನ್(23), ಅಯ್ನಾಝ್(21) ಹಾಗೂ ಅಸೀಮ್(12) ಕೊಲೆಯಾದವರು. ಅನಾಮಿಕ ವ್ಯಕ್ತಿ ಈ ಕೃತ್ಯ ಎಸಗಿದ್ದು ಈ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಹಾಡುಹಗಲೇ ನಡೆಯಿತು ಭೀಕರ ಹತ್ಯೆ..!
ಉಡುಪಿ ಪರಿಸರದಲ್ಲಿ ಇಂತಹದ್ದೊಂದು ಅಮಾನುಷ ಘಟನೆ ಇದೇ ಮೊದಲ ಬಾರಿಗೆ ನಡೆದಿದ್ದು ಇಡೀ ಜಿಲ್ಲೆ ಬೆಚ್ಚಿ ಬಿದ್ದಿದೆ. ಕೊಲೆಗೈದ ಆರೋಪಿಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದ್ದು, ಆರೋಪಿಯು ನಿನ್ನೆ ಬೆಳಗ್ಗೆ 8.30ರ ವೇಳೆಗೆ ರಿಕ್ಷಾ ಮೂಲಕ ನೇಜಾರಿನ ಫ್ಲಾಟ್ ಬಳಿ ಬಂದು ಕೇವಲ 15 ನಿಮಿಷದಲ್ಲಿ ನಾಲ್ವರ ಪ್ರಾಣ ತೆಗೆದು ಮತ್ತೆ ಅದೇ ರಿಕ್ಷಾ ಸ್ಟಾಂಡ್ ಗೆ ಬಂದು ಅಲ್ಲಿಂದ ಬೇರೆಡೆ ತೆರಳಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹಾಡು ಹಗಲೇ ಇಷ್ಟೊಂದು ಅಮಾನುಷವಾಗಿ ಆರೋಪಿ ಕೃತ್ಯ ಎಸಗಿದ್ದಾನೆ.
ತಿಂಡಿ ತಿನ್ನಲು ಬಂದಿದ್ದ ಆಸೀಮ್
ಬ್ರಹ್ಮಾವರ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೃತ ಬಾಲಕ ಆಸೀಮ್ ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸಹಪಾಠಿಗಳೊಂದಿಗೆ ಆಟವಾಡಲು ತೆರಳಿದ್ದ. ಸ್ವಲ್ಪ ಸಮಯದ ಬಳಿಕ ತಿಂಡಿ ತಿನ್ನಲು ಮನೆಗೆ ವಾಪಸ್ಸಾಗಿದ್ದ. ಮನೆಯ ಗೇಟ್ ಬಳಿ ಬರುತ್ತಿದ್ದಂತೆ ಮನೆಯವರ ಕೂಗಾಟ ಕೇಳಿ ಸೈಕಲ್ ಬಿಟ್ಟು ಒಳಗಡೆ ಓಡಿದ್ದ. ಕೃತ್ಯ ಎಸಗಿ ಹೊರಗಡೆ ಬರುತ್ತಿದ್ದ ಹಂತಕ ಆಸೀಮ್ ನನ್ನು ನೋಡಿ ಆತನಿಗೂ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಚೂರಿನಿಂದ ಇರಿದು ಕೊಂದಿದ್ದಾನೆ.
ಹಂತಕನ ಬಗ್ಗೆ ಸುಳಿವು ನೀಡಿದ ಆಟೋ ಚಾಲಕ ಶ್ಯಾಮ್…!
ಸಂತೆಕಟ್ಟೆಯಿಂದ ತೃಪ್ತಿ ನಗರಕ್ಕೆ ರಿಕ್ಷಾದಲ್ಲಿ ಬಂದಿದ್ದ ಆರೋಪಿ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದ.
ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದ. ದೃಢಕಾಯ 45ರ ಆಸುಪಾಸು ವಯಸ್ಸು ಆಗಿರಬಹುದೆಂದು ಅಂದಾಜು ಮಾಡಬಹುದು. ಬ್ರೌನ್ ಕಲರ್ ಅಂಗಿ ಧರಿಸಿದ್ದು ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದ.
ಮನೆಯಲ್ಲಿ ಬಿಟ್ಟು ಹೋಗಿ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್ ಗೆ ಬಂದಿದ್ದ. ಗಡಿಬಿಡಿ ಅಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದ. ಘಟನಾ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ರಕ್ಷಣಾ ಸ್ಟಾಂಡ್ ತಲುಪಿದ್ದ ಆರೋಪಿ ಬೆಂಗಳೂರು ಕನ್ನಡ ಮಾತನಾಡುತ್ತಿದ್ದ. ಮನೆಯವರ ಪರಿಚಯದವನಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.
ಶೌಚಾಲಯಕ್ಕೆ ಓಡಿ ಜೀವ ಉಳಿಸಿಕೊಂಡ ವೃದ್ಧೆ..!
ಕುಕೃತ್ಯ ಎಸಗುತ್ತಿದ್ದ ಹಂತಕನ ಕೃತ್ಯ ತಡೆಯಲು ಬಂದ ಹಸೀನಾ ಅವರ ಅತ್ತೆ ಹಾಜಿರಾ ಅವರ ಹೊಟ್ಟೆ ಭಾಗಕ್ಕೂ ಈತ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡ ಅವರು ಭಯಭೀತರಾಗಿ ಜೀವ ಉಳಿಸಿಕೊಳ್ಳಲು ಶೌಚಾಲಯದೊಳಗೆ ತೆರಳಿ ಬಾಗಿಲು ಮುಚ್ಚಿ ಚಿಲಕ ಹಾಕಿಕೊಂಡು ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶೌಚಾಲಯದ ಬಾಗಿಲು ಮುಚ್ಚಿರುವುದನ್ನು ಗಮನಿಸಿ ಬಾಗಿಲು ಬಡಿದಿದ್ದಾರೆ. ಆತಂಕಗೊಂಡಿದ್ದ ಹಾಜೀರಾ ಅವರು ಮಾತ್ರ ಪೊಲೀಸರೆಂದು ಹೇಳಿದರೂ ಕೂಡಾ ಬಾಗಿಲು ತೆರೆಯಲಿಲ್ಲ. ಆಗ ಬಾಗಿಲು ಮುರಿದು ಪೊಲೀಸರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಬಗ್ಗೆ ಉಡುಪಿ ಎಸ್ಪಿ ಡಾ. ಅರುಣ್ ಹೇಳಿದ್ದೇನು?
“ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದೇವೆ. ಮನೆಯಿಂದ ಚಿನ್ನಾಭರಣ ಕಳವಾಗಿಲ್ಲ. ಹತ್ಯೆಗೆ ಕಾರಣ ಗೊತ್ತಾಗಿಲ್ಲ. ತನಿಖೆ ಮಾಡಿ ಶೀಘ್ರವಾಗಿ ಇದರ ಹಿಂದಿನ ಕಾರಣ ಪತ್ತೆ ಹಚ್ಚುತ್ತೇವೆ. ತನಿಖೆಗಾಗಿ 5 ವಿಶೇಷ ತಂಡಗಳನ್ನು ರಚಿಸಲಾಗಿದೆ” ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ ಉಡುಪಿ ಶಾಸಕ ಪ್ರತಿಕ್ರಿಯೆ..
‘ಘಟನೆಯ ಬಗ್ಗೆ ಪೊಲೀಸರ ಜೊತೆ ಮಾತನಾಡಿದ್ದೇನೆ. ಕೌಟುಂಬಿಕ ವಿಚಾರ ಹಿನ್ನೆಲೆ ಕೃತ್ಯ ಆಗಿರಬಹುದು ಎಂದು ಅನಿಸುತ್ತಿದೆ. ದೀಪಾವಳಿ ಸಂದರ್ಭವೇ ಈ ಕೃತ್ಯ ಆಗಿದ್ದು ಬಹಳ ಬೇಸರ ತಂದಿದೆ. ಕುಟುಂಬದ ಬಗ್ಗೆ ಮಾಹಿತಿ ಇದ್ದೇ ಈ ಕೃತ್ಯ ಎಸಗಿರುವ ಶಂಕೆ ಇದೆ’ ಎಂದು ಹೇಳಿದ್ದಾರೆ.
ಪ್ರತ್ಯೇಕ ವಿಧಿವಿಧಾನಗಳಿಂದ ಅಂತಿಮ ಸಂಸ್ಕಾರ…!
ಇಂದು ಉಡುಪಿಯ ಎರಡು ಮಸೀದಿಗಳಾದ ಇಂದ್ರಾಳಿ ಮಸೀದಿ ಮತ್ತು ಜಾಮಿಯಾ ಮಸೀದಿಯಲ್ಲಿ ನಾಲ್ಕು ಶವಗಳ ಪ್ರತ್ಯೇಕ ವಿಧಿವಿಧಾನ ನಡೆಸಲಾಗಿದೆ. ಕಲ್ಪನಾ ಸಮೀಪದ ಸ್ಮಶಾನದಲ್ಲಿ ಮೃತದೇಹಕ್ಕೆ ಅಂತಿಮ ಸ್ನಾನ ಮಾಡಿಸುವುದರ ಮೂಲಕ ವಿಶೇಷ ಪ್ರಾರ್ಥನೆ ನಡೆಸಿ ಅಂತಿಮ ಸಂಸ್ಕಾರವನ್ನು ಕುಟುಂಬಸ್ಥರ ನಿರ್ಧಾರದಂತೆ ನಡೆಸಲಾಗಿದೆ.