
ಬೆಳ್ತಂಗಡಿ : ಧರ್ಮಸಂರಕ್ಷಣಾ ಯಾತ್ರೆಯ ಬ್ಯಾನರ್ ವಿಚಾರದಲ್ಲಿ ಗೊಂದಲ ಮೂಡಿಸಿದ ಆರೋಪ – ಹಿಂದೂ ಮುಖಂಡ ಮಹೇಶ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು
- ಕರಾವಳಿ
- October 30, 2023
- No Comment
- 85
ನ್ಯೂಸ್ ಆ್ಯರೋ : ಸೌಜನ್ಯಾ ಪ್ರಕರಣದ ಮುಂದಾಳು, ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ, ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಂಗಡಿಗರು ವಿರುದ್ಧ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ದಕ್ಕೆ ಬಾಧಕ ಒಡ್ಡಿರುವ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳ ಗ್ರಾಮದ ನಿವಾಸಿ, ಬಿಜೆಪಿಯ ಮುಖಂಡ ಸಂದೀಪ್ ರೈ ಅವರು ತಿಮರೋಡಿ ಮತ್ತಿತರರ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿನ್ನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್‌ಗಳ ಸಮೀಪದಲ್ಲೇ ಸದ್ರಿ ಪಾದಯಾತ್ರೆಯನ್ನು ನಿಲ್ಲಿಸುವ ಒಳಸಂಚಿನಿಂದ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ದಕ್ಕೆ ಬಾಧಕವಾಗುವಂತಹ ಬರವಣಿಗೆಗಳನ್ನು ಹೊಂದಿರುವ ಬ್ಯಾನರ್‌ಗಳನ್ನು ಅಳವಡಿಸಿರುವ ಆರೋಪ ಹೊರಿಸಲಾಗಿದೆ.
ಪ್ರಾದೇಶಿಕ ಗುಂಪುಗಳ ನಡುವೆ ವೈರತ್ವ, ದ್ವೇಷ, ವೈಮನಸ್ಸು ಭಾವನೆಗಳನ್ನು ಬಿತ್ತಿಸಿ ಅಸೌಹಾರ್ದತೆಯನ್ನು ಸೃಷ್ಟಿಸಿರುವುದಾಗಿ ಆರೋಪಿಸಿ ಸಂದೀಪ್ ರೈ ಅವರು ನೀಡಿದ ದೂರಿನಂತೆ ಮಹೇಶ್ ಶೆಟ್ಟಿ ತಿಮರೋಡಿ, ಅನಿಲ್ ಕುಮಾರ್ ಅಂತರ, ಕಿರಣ್ ಗೌಡ, ಪ್ರಜ್ವಲ್ ಕೆ.ವಿ. ಗೌಡ, ಮನೋಹರ್ ಮನ್ನಡ್ಕ, ಮನೋಜ್ ಸಾಲ್ಯಾನ್ ಕುಂಜರ್ಪ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಲ್ಲದೇ ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ಕೆಟ್ಟದಾಗಿ ಶಬ್ದಗಳನ್ನು ಬರೆದ ಬ್ಯಾನರ್ ಅಳವಡಿಸಲು ಅನುಮತಿ ನೀಡಿದ ಉಜಿರೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.