ಕರಾವಳಿಯಲ್ಲಿ ಶುರುವಾಯ್ತು ಮತ್ತೆ ಧರ್ಮ ದಂಗಲ್..! – ಸುಬ್ರಹ್ಮಣ್ಯದಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ…!

ನ್ಯೂಸ್ ಆ್ಯರೋ : ಕರಾವಳಿ ಅಂದರೆ ಕೋಮುಗಲಭೆ ಪ್ರಚೋದಿಸುವ ಒಂದು ಸೂಕ್ಷ್ಮ ಪ್ರದೇಶವೆಂದೇ ಎಲ್ಲರ ಅಭಿಪ್ರಾಯ. ವ್ಯಾಪಾರ ವಹಿವಾಟಿನಲ್ಲೂ ಧರ್ಮಕ್ಕೆ ಸಂಬಂಧಿಸುದಂತೆ ಅನೇಕ ಬಿಸಿ ಬಿಸಿ ಚರ್ಚೆ, ಪ್ರತಿಭಟನೆಗಳು ನಡೆಯುತ್ತಲೇ ಇರುತ್ತದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಧರ್ಮ ಗಲಭೆ ಇದೀಗ ಮತ್ತೆ ಹೊತ್ತಿಕೊಂಡಿದೆ.

ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ…!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಿದ್ದಾರೆ. ಡಿ.18 ರಂದು ಕುಕ್ಕೆಯಲ್ಲಿ ಚಂಪಾ ಷಷ್ಠಿ ನಡೆಯಲಿದ್ದು, ಈ ಸಂದರ್ಭದಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ. ಅಲ್ಲದೆ ಈ ಸಂಬಂಧ ಹಿಂದೂ ಸಂಘಟನೆ ಮುಖಂಡರು ದೇವಳದ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಮನವಿ ಕೂಡ ಸಲ್ಲಿಸಿದ್ದಾರೆ.

ಇತ್ತ ಸುಬ್ರಹ್ಮಣ್ಯದ ಕುಮಾರಧಾರ ಬಳಿ ಬ್ಯಾನರ್ ಕೂಡ ಹಾಕಿದ್ದಾರೆ. ಹಿಂದೂ ಹಿತರಕ್ಷಣಾ ವೇದಿಕೆ ಸುಬ್ರಹ್ಮಣ್ಯ ಅನ್ನೋ ಹೆಸರಲ್ಲಿ ಬ್ಯಾನರ್ ಹಾಕಲಾಗಿದೆ. ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯಮತೀಯ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಅಂತ ಬ್ಯಾನರ್ ನಲ್ಲಿ ತಿಳಿಸಲಾಗಿದೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದಾಗಿದೆ.

ಪ್ರತೀ ಬಾರಿ ದ.ಕ ಜಿಲ್ಲೆಯ ಅನೇಕ ದೇವಸ್ಥಾನದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಈ ರೀತಿಯ ಬಹಿಷ್ಕಾರವೊಡ್ಡುವ ಹಿಂದೂ ಸಂಘಟನೆಗಳು ಈ ಹಿಂದೆ ಮಂಗಳಾದೇವಿಯಲ್ಲೂ ಕೂಡಾ ನವರಾತ್ರಿ ಸಂದರ್ಭ ಕೇವಲ ಹಿಂದೂಗಳಿಗೆ ವ್ಯಾಪಾರ ನೀಡಲು ಅವಕಾಶ ಕಲ್ಪಿಸಲಾಗಿತ್ತು.