ಉಡುಪಿ : ಸಾಯುವ ಕ್ಷಣದಲ್ಲೂ ಬಡವರ ಬಗ್ಗೆ ಮಮಕಾರ ತೋರಿದ ಲೀಲಾಧರ ಶೆಟ್ಟಿ ದಂಪತಿ – ಡೆತ್ ನೋಟ್ ನಲ್ಲಿ ಸಾಲ ಕೊಟ್ಟವರ ಪಟ್ಟಿ ಸೇರಿ ಏನೇನಿದೆ?

ನ್ಯೂಸ್ ‌ಆ್ಯರೋ : ಉಡುಪಿಯ ಕಾಪು ತಾಲೂಕಿನ ಕರಂದಾಡಿಯ ಖ್ಯಾತ ಸಮಾಜ ಸೇವಕ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಿಂದ ಈ ಭಾಗದ ಜನತೆ ವಿಚಲಿತಗೊಂಡಿದ್ದಾರೆ. ಸಾವಿನ ನಿರ್ಧಾರದ ವೇಳೆಯೂ ಲೀಲಾಧರ ಶೆಟ್ಟಿ ಅವರು ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಸದ್ಯ ಪೊಲೀಸರ ವಶದಲ್ಲಿರುವ ಡೆತ್ ನೋಟ್ ನಲ್ಲಿ, ಅವರು ಬರೆದಿರುವ ಅಂಶಗಳು ಗಮನ ಸೆಳೆದಿದೆ. ನನ್ನ ನಿರ್ಧಾರ ನಿಮಗೆಲ್ಲರಿಗೂ ನೋವು ತಂದಿರಬಹುದು. ಆದರೆ ನನಗೆ ಪ್ರಾಣಕ್ಕಿಂತ ಮಾನ ಮುಖ್ಯ ಎಂದು ಬರೆದಿದ್ದರು.

ಜೊತೆಗೆ ತನ್ನ ಉತ್ತರಕ್ರಿಯೆಯನ್ನು ಖರ್ಚು ಮಾಡದೆ ಸರಳವಾಗಿ ಮಾಡಿ. ಉಳಿದ ಹಣವನ್ನು ಬಡವರಿಗೆ ಮಕ್ಕಳಿಗೆ ನೀಡಿ ಎಂದು ಬರೆದಿದ್ದಾರೆ.

ತಾನು ಕಲಿತ ಕರಂದಾಡಿ ಶಾಲೆಯನ್ನು ಅಭಿವೃದ್ಧಿಪಡಿಸಬೇಕು, ಊರಿನಲ್ಲಿ ಬಾಕಿ ಉಳಿದಿರುವ ಕೆರೆ ಹಾಗೂ ರಸ್ತೆಗಳ ಅಭಿವೃದ್ಧಿ ಕೆಲಸಗಳು ಆಗಬೇಕು. ತನ್ನ ಊರಿನ ದೇವಸ್ಥಾನ ಹಾಗೂ ದೈವಸ್ಥಾನಗಳ ಜೀರ್ಣೋದ್ದಾರ ಕೆಲಸಗಳು ಆದಷ್ಟು ಬೇಗ ಆಗಲಿ. ಇದುವೇ ನನಗೆ ನೀಡುವ ಶ್ರದ್ಧಾಂಜಲಿ ಎಂದು ಬರೆದಿರುವುದಾಗಿ ತಿಳಿದು ಬಂದಿದೆ.

ಸಾವಿನಲ್ಲೂ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವ ಲೀಲಾಧರ ಶೆಟ್ಟಿ ಅವರ ಮಾತುಗಳು ಜನರನ್ನು ದುಃಖತಪ್ತರನ್ನಾಗಿ ಮಾಡಿದೆ. ಸಾಕು ಮಗಳು ಮನೆ ಬಿಟ್ಟು ಹೋದ ನೋವಿನಲ್ಲಿ ಈ ದಂಪತಿಗಳು, ಮಾನಕ್ಕೆ ಅಂಜಿ ಆತ್ಮಹತ್ಯೆ ಶರಣಾಗಿದ್ದರು.