ಅಟ್ಲಿ ಬಣ್ಣದ ಬಗ್ಗೆ ಕಪಿಲ್ ಶರ್ಮಾ ಟೀಕೆ; ನಗದೆ ಉತ್ತರ ಕೊಟ್ಟ ನಿರ್ದೇಶಕ
ನ್ಯೂಸ್ ಆ್ಯರೋ: ಅಟ್ಲಿ ಅವರು ಖ್ಯಾತ ನಿರ್ದೇಶಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಅವರು ಈಗ ಬಾಲಿವುಡ್ನಲ್ಲೂ ಹೆಸರು ಮಾಡಿದ್ದಾರೆ. ಈಗ ಅಟ್ಲಿ ಅವರ ದೇಹದ ಬಣ್ಣವನ್ನು ಇಟ್ಟುಕೊಂಡು ಕಪಿಲ್ ಶರ್ಮಾ ಅವರು ಟೀಕೆ ಮಾಡಿದ್ದಾರೆ. ಇದಕ್ಕೆ ನಗದೆ ಅಟ್ಲಿ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಅಟ್ಲಿ ಅವರು ಇತ್ತೀಚೆಗೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಆಗಮಿಸಿದ್ದರು. ಈ ವೇಳೆ ಪ್ರಶ್ನೆ ಕೇಳುವ ಭರದಲ್ಲಿ ಕಪಿಲ್ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ‘ಯಾವುದಾದರೂ ಸ್ಟಾರ್ನ ಮೊದಲ ಬಾರಿ ಭೇಟಿ ಮಾಡಲು ಹೋದಾಗ ಅಟ್ಲಿ ಎಲ್ಲಿ ಎಂದು ಕೇಳಿದ ಉದಾಹರಣೆ ಇದೆಯೇ’ ಎಂದು ಕೇಳುತ್ತ ನಕ್ಕರು ಕಪಿಲ್ ಶರ್ಮಾ. ಆದರೆ, ಅಟ್ಲಿ ನಗಲಿಲ್ಲ.
‘ನೀವು ಯಾವ ಅರ್ಥದಲ್ಲಿ ಪ್ರಶ್ನೆ ಕೇಳಿದಿರಿ ಎಂಬುದು ನನಗೆ ಅರ್ಥವಾಯಿತು. ನಾನು ಉತ್ತರಿಸಲು ಪ್ರಯತ್ನಿಸುತ್ತೇನೆ. ನಾನು ಎಆರ್ ಮುರುಗದಾಸ್ಗೆ ಧನ್ಯವಾದ ಹೇಳಬೇಕು. ಅವರೇ ನನ್ನ ಮೊದಲ ಸಿನಿಮಾನ ನಿರ್ಮಾಣ ಮಾಡಿದ್ದು. ಅವರು ಸ್ಕ್ರಿಪ್ಟ್ ಕೇಳಿದರು. ನಾನು ಹೇಗಿದ್ದೇನೆ ಎಂದು ನೋಡಿಲ್ಲ. ಅವರು ನನ್ನ ಸ್ಕ್ರಿಪ್ಟ್ ನರೇಷನ್ ಕೇಳಿ ಇಷ್ಟಪಟ್ಟರು. ನಾವು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ಜಡ್ಜ್ ಮಾಡಬಾರದು. ನಮ್ಮ ಮನಸ್ಸನ್ನು ನೋಡಿ ಜಡ್ಜ್ ಮಾಡಬೇಕು’ ಎಂದು ಅಟ್ಲಿ ಹೇಳಿದ್ದಾರೆ.
ಅನೇಕರು ಈ ವಿಡಿಯೋನ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಪಿಲ್ ಶರ್ಮಾ ಕೇಳಿದ ಪ್ರಶ್ನೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಅಟ್ಲಿ ಅವರ ಬಣ್ಣ ನೋಡಿ ಈ ರೀತಿಯಲ್ಲಿ ಟೀಕೆ ಮಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
Leave a Comment