ಸೈಫ್ ಅಲಿಖಾನ್ಗೆ ಚಾಕು ಇರಿದವ ಅರೆಸ್ಟ್; ಘಟನೆಯ ಬೆನ್ನಲ್ಲೇ ಕರೀನಾ ಕಪೂರ್ ವಿಶೇಷ ಮನವಿ

ನ್ಯೂಸ್ ಆ್ಯರೋ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಹು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ಸೈಫ್ ಸೇಫ್ ಆಗಿದ್ದು, ICUನಿಂದ ಹೊರ ಬಂದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇದೇ ವೇಳೆ ಬಾಂದ್ರಾ ಪೊಲೀಸರು ಸೈಫ್ ಅಲಿಖಾನ್ಗೆ ಚಾಕು ಇರಿದ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ.
ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ದಾಳಿಕೋರನನ್ನ 30 ಗಂಟೆಗಳ ಬಳಿಕ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯನ್ನ ಬಾಂದ್ರಾ ಠಾಣೆಗೆ ಕರೆತಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸೈಫ್ ಅಲಿ ಖಾನ್ ಅಪಾಯದಿಂದ ಪಾರಾಗಿದ್ದು, ಪತ್ನಿ ಕರೀನಾ ಕಪೂರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಕರೀನಾ ಕಪೂರ್, ಅತ್ಯಂತ ಕಷ್ಟದ ಸಮಯದಲ್ಲಿ ಜೊತೆಗಿದ್ದವರಿಗೆ ಧನ್ಯವಾದಗಳನ್ನು ತಿಳಿಸಿ, ಅಭಿಮಾನಿಗಳಲ್ಲಿ ವಿಶೇಷ ಮನವಿಯನ್ನು ಮಾಡಿದ್ದಾರೆ.

ಇದು ನಮ್ಮ ಕುಟುಂಬಕ್ಕೆ ನಂಬಲು ಅಸಾಧ್ಯವಾದ ಅತಿ ದೊಡ್ಡ ಸವಾಲಿನ ಸಮಯವಾಗಿದೆ. ಈ ಘಟನೆಯು ನಮ್ಮ ಕುಟುಂಬಕ್ಕೆ ಶಾಕಿಂಗ್ ಆಗಿದ್ದು ಅದರಿಂದ ಹೊರಬರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಅತ್ಯಂತ ಕಷ್ಟಕರ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳು ಮತ್ತು ಪಾಪರಾಜಿಗಳಿಗೆ ನಮ್ಮದೊಂದು ವಿಶೇಷ ಮನವಿ. ಸೈಫ್ ಅಲಿ ಖಾನ್ ದಾಳಿಯ ಘಟನೆ ಕುರಿತು ಊಹಾಪೋಹ ಸುದ್ದಿಗಳನ್ನು ಪ್ರಚಾರ ಮಾಡಬೇಡಿ.
ನಿಮ್ಮೆಲ್ಲರ ಕಾಳಜಿ ಮತ್ತು ಬೆಂಬಲವನ್ನು ನಾವು ಗೌರವಿಸುತ್ತೇವೆ. ಭದ್ರತೆಯ ವಿಚಾರದಲ್ಲಿ ನಿಮ್ಮ ಕಾಳಜಿಯೂ ಬಹಳ ಮುಖ್ಯವಾಗಿದೆ. ಈ ಸಂದರ್ಭದಲ್ಲಿ ಕುಟುಂಬಕ್ಕೆ ಸಾಕಷ್ಟು ಸಮಯ ಮೀಸಲಿಡಬೇಕಾದ ಅಗತ್ಯವಿದೆ ಎಂದು ಕರೀನಾ ಕಪೂರ್ ಮನವಿ ಮಾಡಿದ್ದಾರೆ.
Leave a Comment