
ವಿಮಾನ ಯಾನ ಸಂದರ್ಭದಲ್ಲಿ ಏರೋ ಪ್ಲೇನ್ ಮೋಡ್ ಆನ್ ಮಾಡ್ಲೇಬೇಕು – ಯಾಕೆ ಹೀಗೆ ಆರ್ಡರ್ ಮಾಡ್ತಾರೆ ಗೊತ್ತಾ?
- ಕೌತುಕ-ವಿಜ್ಞಾನ
- September 4, 2023
- No Comment
- 88
ನ್ಯೂಸ್ ಆ್ಯರೋ : ವಿಮಾನ ಯಾನ ಸಂದರ್ಭದಲ್ಲಿ ಪ್ರಯಾಣಿಕರ ಎಲೆಕ್ಟ್ರಾನಿಕ್ ಉಪಕರಣಗಳಾದ ಟ್ಯಾಬ್ಲೆಟ್, ಮೊಬೈಲ್ ಫೋನ್, ಲ್ಯಾಪ್ ಟಾಪ್ ಮುಂತಾದವುಗಳನ್ನು ಸ್ವಿಚ್ ಆಫ್ ಮಾಡಲು ಅಥವಾ ಏರೋಪ್ಲೇನ್ ಮೋಡ್ ಗೆ ಹಾಕಲು ಹೇಳಲಾಗುತ್ತದೆ. ಇದು ಯಾಕೆಂದು ಗೊತ್ತೆ? ಇಲ್ಲಿದೆ ವಿವರ.
ಸಂಪರ್ಕ ಕಡಿತ
ಯಾವುದೇ ಉಪಕರಣವನ್ನು ಏರೋಪ್ಲೇನ್ ಮೋಡ್ ಗೆ ಹಾಕಿದಾಗ ಅದರ ಎಲ್ಲಾ ವೈರ್ ಲೆಸ್ ಸಂಪರ್ಕ ಕಡಿತವಾಗುತ್ತದೆ. ಸಿಗ್ನಲ್ ತೋರಿಸುವ ಚಿಹ್ನೆ ಬದಲಿಗೆ ಆ ಸ್ಥಳದಲ್ಲಿ ವಿಮಾನದ ಚಿತ್ರ ಮೂಡುತ್ತದೆ. ಹೀಗಾದಾಗ ಯಾವುದೇ ಕರೆ, ಮೆಸೇಜ್ ಬರುವುದಿಲ್ಲ. ಜೊತೆಗೆ ಇಂಟರ್ ನೆಟ್ ಬಳಸಲು ಸಾಧ್ಯವಾಗುವುದಿಲ್ಲ. ಈ ಮೋಡ್ ವೈ-ಫೈ ಸಂಪರ್ಕವನ್ನೂ ಕಡಿತಗೊಳಿಸುತ್ತದೆ. ಅದಾಗ್ಯೂ ಒಂದು ವೇಳೆ ಏರೋಪ್ಲೇನ್ ಮೋಡ್ ನಲ್ಲಿರುವಾಗ ವೈ-ಫೈ ಲಭ್ಯವಾದರೆ ಇಂಟರ್ ನೆಟ್ ಬಳಕೆ ಮುಂದುವರಿಸಬಹುದು.
ಏರೋಪ್ಲೇನ್ ಮೋಡ್ ಯಾಕೆ ಆನ್ ಮಾಡಬೇಕು?
ಎಲೆಕ್ಟ್ರಾನಿಕ್ಸ್ ಉಪಕರಣಗಳು ಆನ್ ಆಗಿದ್ದರೆ ಇದರಿಂದ ಹೊರ ಸೂಸುವ ಸಂಕೇತಗಳು ವಿಮಾನದ ಸಂವಹನ ವ್ಯವಸ್ಥೆಗಳಿಗೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. ಪ್ರತಿ ಎಲೆಕ್ಟ್ರಾನಿಕ್ ಉಪಕರಣ ಶಕ್ತಿಶಾಲಿ ರೇಡಿಯೋ ತರಂಗಗಳನ್ನು ಹೊಂದಿದ್ದು, ಇವು ಪೈಲಟ್ ಗೆ ಭೂಮಿಯಲ್ಲಿನ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಅಡ್ಡಿಪಡಿಸಬಹುದು. ವಿಮಾನ ಆಕಾಶದಲ್ಲಿ ಹಾರಾಡುತ್ತಿರುವಾಗ ಅಪಾಯ ಸಂಭವಿಸಿ ಭೂಮಿಯ ಜೊತೆಗೆ ಪೈಲಟ್ ಗೆ ಸಂಪರ್ಕ ಸಾಧಿಸಲು ಸಾಧ್ಯವಾಗದಿದ್ದರೆ? ಈ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ ಅಲ್ಲವೆ? ಅದಕ್ಕಾಗಿಯೇ ಮಂಜಾಗ್ರತಾ ಕ್ರಮವಾಗಿ ಏರೋಪ್ಲೇನ್ ಮೋಡ್ ಬಳಸಲು ಹೇಳಲಾಗುತ್ತದೆ.
ಸಂವಹನಕ್ಕೆ ತೊಂದರೆಯಾಗದಿರಲು ಸಂಪರ್ಕವನ್ನು ಕಡಿತ ಮಾಡಲಾಗುತ್ತದೆ. ಒಂದು ವೇಳೆ ವಿಮಾನ ವೈ-ಫೈ ಅನುಮತಿಸಿದರೆ ಬಳಸಬಹುದು ಎಂದು ಫೆಡರಲ್ ಕಮ್ಯೂನಿಕೇಷನ್ಸ್ ಕಮಿಷನ್(FCC) ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಹೇಳುತ್ತದೆ.