
ಇಂದಿನಿಂದ ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ – ಉತ್ತರ ಒಳನಾಡಿನಲ್ಲಿ ‘ಯೆಲ್ಲೋ ಅಲರ್ಟ್’ ಘೋಷಣೆ
- ಕರ್ನಾಟಕ
- September 4, 2023
- No Comment
- 530
ನ್ಯೂಸ್ ಆ್ಯರೋ : ಇಂದಿನಿಂದ ನಾಲ್ಕು ದಿನ ರಾಜ್ಯದಾದ್ಯಂತ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಂದು ಮತ್ತೆ ನಾಳೆ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್,ರಾಯಚೂರು, ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಸೂಚಿಸಲಾಗಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲೂ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೆ ನೈಋತ್ಯ ಮುಂಗಾರು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿಯಲ್ಲಿ ಮಳೆ ದುರ್ಬಲವಾಗಿತ್ತು.
ಭಾನುವಾರ ಚಿತ್ತಾಪುರ-11, ಸೇಡಂ-10, ತೊಂಡೇಬಾವಿ, ಬೆಳ್ಳೂರು-7, ಶಹಾಪುರ-5, ಚಿಂಚೋಳಿ, ಆಳಂದ, ಅಫಜಲಪುರ, ಚಿಂತಾಮಣಿ-4, ಜೇವರ್ಗಿ, ನೆಲೋಗಿ, ಯಡ್ರಾಮಿ, ಕೆಂಭಾವಿ, ದೇವದುರ್ಗ ಮತ್ತು ಚಿಕ್ಕಬಳ್ಳಾಪುರ- ತಲಾ 3 ಸೆಂ.ಮೀ. ಮಳೆಯಾಗಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ರಾಯಚೂರು, ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾದರೆ, ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ ಮುಂತಾದ ಕಡೆಗಳಲ್ಲಿ ಮಳೆಯಾಗಲಿದ್ದು, ಸುಮಾರು 10ರಿಂದ 30 ಮಿ.ಮೀ.ನಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆ
ದಕ್ಷಿಣ ಒಳನಾಡಿನ ಬಗ್ಗೆ ಹೇಳುವುದಾದರೆ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ ಧಾರವಾಡ, ಬಳ್ಳಾರಿ, ವಿಜಯನಗರ, ಬೆಳಗಾವಿಯ ಪೂರ್ವಭಾಗ, ವಿಜಯಪುರದ ಪಶ್ಚಿಮ ಭಾಗಗಳಲ್ಲಿ 5ರಿಂದ 10 ಮಿ.ಮೀ. ಮಳೆಯಾಗುವ ಸಾಧ್ಯತೆಗಳಿವೆ.
ತುಮಕೂರು, ಬೆಂಗಳೂರು ನಗರ, ಚಿತ್ರದುರ್ಗ ಜಿಲ್ಲೆಯ ದಕ್ಷಿಣ ಭಾಗ, ಹಾವೇರಿ, ಗದಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿವೆ. ಇನ್ನುಳಿದಂತೆ, ಕೋಲಾರ, ತುಮಕೂರಿನ ಉತ್ತರ ಭಾಗದಲ್ಲಿ ತುಂತುರು ಮಳೆಯಾಗಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಈ ವರ್ಷ ವರುಣನ ಕೃಪೆ ತುಂಬಾನೇ ಕಡಿಮೆಯಾಗಿದೆ.