ಪ್ರವಾಸಿಗರ ದೋಣಿಗೆ ಭಾರತೀಯ ನೌಕಾಪಡೆ ಬೋಟು ಡಿಕ್ಕಿ; 13 ಮಂದಿ ಸಾವು, ಭೀಕರ ದೃಶ್ಯ ಸೆರೆ

ನ್ಯೂಸ್ ಆ್ಯರೋ: ಭಾರತೀಯ ನೌಕಾಪಡೆಯ ಸ್ಪೀಡ್ ಬೋಟ್ ಹಾಗೂ ಪ್ರವಾಸಿಗರ ಕರೆದೊಯ್ಯುತ್ತಿದ್ದ ಬೋಟು ಅಪಘಾತಕ್ಕೀಡಾದ ಘಟನೆ ಮುಂಬೈ ಕರಾವಳಿ ತೀರದಲ್ಲಿ ನಡೆದಿದೆ. ಮುಂಬೈನ ಕೊಲಾಬಾದ ಗೇಟ್‌ವೇ ಆಫ್ ಇಂಡಿಯಾ ಬಳಿಯಿಂದ ಎಲಿಫೆಂಟಾ ಕೇವ್ಸ್ ದ್ವೀಪಕ್ಕೆ ಪ್ರವಾಸಿಗರ ಬೋಟು ಮೂಲಕ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಭಾರತೀಯ ನೌಕಾಪಡೆಯ ಸ್ಪೀಡ್ ಬೋಟ್ ನಿಯಂತ್ರಣ ತಪ್ಪಿ ರಭಸದಿಂದ ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಇತ್ತ 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ.
ನೌಕಾಪಡೆಯ ಬೋಟು ಡಿಕ್ಕಿಯಾಗುತ್ತಿದ್ದಂತೆ ಪ್ರವಾಸಿಗರ ದೋಣಿ ಮುಳುಗಲು ಆರಂಭಿಸಿದೆ. ಡಿಕ್ಕಿಯಾದ ರಭಸದಲ್ಲಿ ಕೆಲ ಪ್ರವಾಸಿಗರು ಸಮುದ್ರಕ್ಕೆ ಬಿದ್ದಿದ್ದಾರೆ. ತಕ್ಷಣವೇ ಭಾರತೀಯ ನೌಕಾಡೆಯ ಇತರ ಬೋಟುಗಳು, ಕೋಸ್ಟಲ್ ಗಾರ್ಡ್ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರವಾಸಿಗರು ಸೇರಿದಂತೆ ಇತರರ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮುಂಬೈನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಎಲಿಫಾಂಟಾ ಕೇವ್ಸ್ ಕೂಡ ಒಂದಾಗಿದೆ. ಇಂಡಿಯಾ ಗೇಟ್‌ನಿಂದ ಐದೈದು ನಿಮಿಷಕ್ಕೆ ಸರಿಸುಮಾರು 100 ಪ್ರವಾಸಿಗರು ಕರೆದೊಯ್ಯುವ ಸಾಮರ್ಥ್ಯದ ಬೋಟುಗಳು ತೆರಳುತ್ತದೆ. ಹೀಗೆ ನೀಲ್‌ಕಮಲ್ ಬೋಟು ಸಿಬ್ಬಂದಿಗಳು ಸೇರಿದಂತೆ 110 ಮಂದಿಯನ್ನು ಎಲಿಫಾಂಟ ಕೇವ್ಸ್‌ಗೆ ಕರೆದೊಯುತ್ತಿತ್ತು. ಕೆಲ ದೂರ ತೆರಳಿದಾಗ ಸಮುದ್ರದಲ್ಲಿ ನೌಕಾಪಡೆ ಬೋಟುಗಳು ಎಂಜಿನ್ ಟ್ರಯಲ್ ನಡೆಸುತ್ತಿತ್ತು. ಈ ವೇಳೆ ಸ್ಪೀಡ್ ಬೋಟಿನ ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ಸ್ಪೀಡ್ ಬೋಟು ವೇಗವಾಗಿ ಬಂದು ಪ್ರಯಾಣಿಕರ ಫೆರಿಗೆ ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ನೌಕಾಪಡೆ ಅಧಿಕಾರಿ, ಪ್ರಯಾಣಿಕರು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಈ ಪೈಕಿ ಐವರ ಪರಿಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರಲ್ಲಿ 10 ನಾಗರೀಕರು ಹಾಗೂ ಮೂವರು ನೌಕಾಪಡೆ ಅಧಿಕಾರಿಗಳು ಸೇರಿದ್ದಾರೆ. ಘಟನೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಘಾತ ವ್ಯಕ್ತಪಡಿಸಿದ್ದಾರೆ. ದುರದೃಷ್ಟಕರ ಘಟನೆಗೆ ತೀವ್ರ ನೋವು ವ್ಯಕ್ತಪಡಿಸಿರುವ ರಾಜನಾಥ್ ಸಿಂಗ್ ಮೃತರ ಕುಟುಂಬ ಸಂತಾಪ ಸೂಚಿಸಿದ್ದಾರೆ.
ಘಟನೆ ಕುರಿತು ನಾಗ್ಪುರದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಎಲ್ಲಾ ನೆರವು ನೀಡುವುದಾಗಿ ಹೇಳಿದ್ದಾರೆ. ಘಟನೆಯಿಂದ ನೋವಾಗಿದೆ. 101 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದಿದ್ದಾರೆ. 13 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಭಾರತೀಯ ನೌಕಾಪಡೆಯ 11 ಬೋಟುಗಳು, ಮರೀನ್ ಪೊಲೀಸ್ ಪಡೆಯ 3 ಬೋಟು ಹಾಗೂ ಕರಾವಳಿ ಪಡೆಯ ಬೋಟುಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರೆಗೆ ನಾಲ್ಕು ಹೆಲಿಕಾಪ್ಟನ್ನು ಬಳಸಿಕೊಳ್ಳಲಾಗಿದೆ.
Leave a Comment