ವಯನಾಡ್ : ಬೆಳಗಿನ ಜಾವ ಮೂರು ಕಡೆಗಳಲ್ಲಿ ಭಾರೀ ಭೂಕುಸಿತ – 400 ಕುಟುಂಬಗಳು ಅತಂತ್ರ, 6 ಶವ ಹೊರಕ್ಕೆ : ಸಾವಿನ ಸಂಖ್ಯೆ ಏರುವ ಭೀತಿ..!
ನ್ಯೂಸ್ ಆ್ಯರೋ : ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಮುಂಡಕೈ ಪಟ್ಟಣ ಮತ್ತು ಚೂರಲ್ ಮಲ ಎಂಬ ಮೂರು ಪ್ರದೇಶದಲ್ಲಿ ಇಂದು ಬೆಳಗ್ಗಿನ ಜಾವ ಭಾರೀ ಭೂಕುಸಿತ ಸಂಭವಿಸಿದ್ದು, ಇದುವರೆಗೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಲೆಕ್ಕ ಮೀರುವ ಭೀತಿ ಮೂಡಿಸಿದೆ.
ಮುಂಡಕೈ ಪೇಟೆಯಲ್ಲಿ ಬೆಳಗಿನ ಜಾವ ಸರಿಸುಮಾರು 4 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆಗೆ ಮೊದಲ ಭೂಕುಸಿತ ಸಂಭವಿಸಿದ್ದರೆ, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಚೂರಲ್ ಮಲ ಶಾಲೆಯ ಬಳಿ ಎರಡನೇಯ ಭೂಕುಸಿತ ಸಂಭವಿಸಿದೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಶಾಲೆಯೊಂದು ಭಾಗಶ: ಕೊಚ್ಚಿ ಹೋಗಿವೆ. ಜಲಸ್ಪೋಟದಲ್ಲಿ ಬಂಡೆ ಕಲ್ಲುಗಳು ಕೊಚ್ಚಿಕೊಂಡು ಅತೀ ವೇಗದಲ್ಲಿ ಬಂದಿದ್ದರಿಂದ ಹೆಚ್ಚಿನ ಪ್ರಮಾಣದ ನಾಶ ಸಂಭವಿಸಿದೆ ಎನ್ನಲಾಗಿದೆ. ಒಟ್ಟು ಮೂರು ಕಡೆಗಳಲ್ಲಿ ಬಾರಿ ಭೂಕುಸಿತ ಸಂಭವಿಸಿದೆ ಎನ್ನಲಾಗುತ್ತಿದೆ. ಭಾರೀ ಶಬ್ದದೊಂದಿಗೆ ಭೂಕುಸಿತ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ. 2019 ರಲ್ಲಿ ಭೂಕುಸಿತಕ್ಕೆ ಒಳಗಾದ ಪುತ್ತುಮಲ ಬಳಿಯೇ ಮುಂಡಕೈ ಇದ್ದು, ಹಳೆಯ ನೆನಪು ಮರುಕಳಿಸುವಂತೆ ಮಾಡಿದೆ.
ಈ ಪ್ರದೇಶದಲ್ಲಿ ಸುಮಾರು ಕನಿಷ್ಠ 400 ಕುಟುಂಬಗಳು ವಾಸವಾಗಿದ್ದು, ಆ ಪೈಕಿ ಬಹುಪಾಲು ಕುಟುಂಬಗಳು ಅಸಹಾಯಕ ಸ್ಥಿತಿಯಲ್ಲಿವೆ. ಅನೇಕ ಜನರು ಗಾಯಗೊಂಡಿದ್ದರೆ, ಹಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಹಾನಿಗೊಳಗಾದ ಪ್ರದೇಶದ ಮುಖ್ಯ ರಸ್ತೆ ಮತ್ತು ಚೂರಲ್ ಮಲ ಪಟ್ಟಣದ ಸೇತುವೆ ಹಾನಿಗೊಳಗಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಮುಖ್ಯ ಅಡಚಣೆಯಾಗಿದೆ. ಮುಂಡಕೈ ಅಟ್ಟಮಲ ಪ್ರದೇಶಕ್ಕೆ ಇದು ಏಕೈಕ ಸೇತುವೆಯಾಗಿದೆ. ರಾತ್ರಿ ವೇಳೆಯಾಗಿದ್ದರಿಂದ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅತ್ಯಂತ ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದ್ದು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ.
ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಟಿ. ಸಿದ್ದೀಕ್ ಶಾಸಕರು ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಈ ಪ್ರದೇಶದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ.
Leave a Comment