ಈ ರಾಜಮನೆತನದ ವಾರಸುದಾರ ಆಗ್ತಿದ್ದಾರೆ ಮಾಜಿ ಸ್ಟಾರ್ ಕ್ರಿಕೆಟಿಗ; ಯಾರಿವರು ? ಇದರ ಹಿನ್ನಲೆಯೇನು?
ನ್ಯೂಸ್ ಆ್ಯರೋ: ಗುಜರಾತ್ನ ಜಾಮ್‌ನಗರ ರಾಜ ಮನೆತನದ ಮುಂದಿನ ವಾರಸುದಾರರಾಗಿ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾರನ್ನು ಆಯ್ಕೆ ಮಾಡಲಾಗಿದೆ. ಇಂದು ಬೆಳಗ್ಗೆ ಜಾಮ್ ಸಾಹೇಬ್ ಶತ್ರುಶಲ್ಯ ಸಿಂಗ್ ಮಹಾರಾಜ್ ಐತಿಹಾಸಿಕ ನಿರ್ಧಾರ ಪ್ರಕಟಿಸಿದ್ದಾರೆ.
“14 ವರ್ಷಗಳ ವನವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪಾಂಡವರು ವಿಜಯವನ್ನು ಅನುಭವಿಸಿದ ದಿನ ದಸರಾ. ಇಂದು ನಾನು ಕೂಡ ವಿಜಯಶಾಲಿ ಆಗಿದ್ದೇನೆ. ಅಜಯ್ ಜಡೇಜಾ ನನ್ನ ಉತ್ತರಾಧಿಕಾರಿ. ನವನಗರದ ಮುಂದಿನ ಜಾಮ್ ಸಾಹೇಬ್” ಎಂದು ಅವರು ಘೋಷಣೆ ಮಾಡಿದ್ದಾರೆ. ಈ ಜವಾಬ್ದಾರಿಯನ್ನು ಸ್ವೀಕರಿಸಿದ್ದಕ್ಕಾಗಿ ಅಜಯ್ ಜಡೇಜಾಗೆ ಧನ್ಯವಾದ ಕೂಡ ತಿಳಿಸಿದ್ದಾರೆ.
ಅಜಯ್ ಜಡೇಜಾ ಕ್ರಿಕೆಟ್‌ನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಟಿ-20 ವಿಶ್ವಕಪ್ ಅವಧಿಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮಾರ್ಗದರ್ಶಕರಾಗಿದ್ದರು. ಅವರ ಕೋಚಿಂಗ್ನಲ್ಲಿ ಆಫ್ಘಾನ್ ಅದ್ಭುತ ಪ್ರದರ್ಶನ ನೀಡಿತ್ತು. ಜಡೇಜಾ ತಮ್ಮ ಸೇವೆಗೆ ಯಾವುದೇ ಶುಲ್ಕ ತೆಗೆದುಕೊಂಡಿಲ್ಲ. ಈ ಔದಾರ್ಯಕ್ಕೆ ತುಂಬಾ ಮೆಚ್ಚುಗೆ ವ್ಯಕ್ತವಾಗಿತ್ತು.
ರಾಜಮನೆತನದ ಇತಿಹಾಸ:
ಜಾಮ್‌ನಗರದ ರಾಜಮನೆತನದ ಇತಿಹಾಸವು, ಜಡೇಜಾ ರಾಜವಂಶದ ರಾಜ ಜಾಮ್ ರಾವಲ್‌ಗೆ ಗೆ ಸಂಬಂಧಿಸಿದೆ. ಈತ ಕ್ರಿಸ್ತಶಕ 1540ರಲ್ಲಿ ನವನಗರ ರಾಜ್ಯವನ್ನು ಸ್ಥಾಪಿಸಿದ. ರಂಗಮತಿ ಮತ್ತು ನಾಗಮತಿ ಎಂಬ ಎರಡು ನದಿಗಳ ದಡದಲ್ಲಿ ಕೋಟೆ ಮತ್ತು ಅರಮನೆಯೊಂದಿಗೆ ಆಶಾಪುರ ದೇವಿಯ ದೇವಾಲಯವನ್ನು ನಿರ್ಮಿಸಿದ್ದ. 36 ಬಗೆಯ ರಜಪೂತರು ಜಾಮ್ ರಾವಲ್ ಜೊತೆ ಕಚ್ನಿಂದ ಜಾಮ್ ನಗರಕ್ಕೆ ಬಂದಿದ್ದರು.
ಸ್ಥಳೀಯ ಭಾಷೆಯಲ್ಲಿ ‘ಜಾಮ್’ ಪದ ಅರ್ಥ ಮುಖ್ಯಸ್ಥ ಎಂದು. ಜಾಮ್ ಸಾಹೇಬ್ ಎಂಬ ಬಿರುದನ್ನು ಮೊದಲು ಬಳಸಿದ್ದು ಜಮ್ ರಾವಲ್ಜಿ ಜಡೇಜಾ. ಜಾಮ್‌ನಗರವನ್ನು ಹಿಂದೆ ಬ್ರಾಸ್ ಸಿಟಿ ಎಂದು ಕರೆಯಲಾಗ್ತಿತ್ತು. ಜಾಮ್‌ನಗರವು ಭಾರತೀಯ ವಾಯುಪಡೆ, ಭಾರತೀಯ ಸೇನೆ ಮತ್ತು ಭಾರತೀಯ ನೌಕಾಪಡೆಗೆ ಬೇಸ್ ಸ್ಟೇಷನ್‌ಗಳನ್ನು ಹೊಂದಿದೆ. ನಾಲ್ಕು ಪ್ರಸಿದ್ಧ ಅಮೃತಶಿಲೆ ಜೈನ ದೇವಾಲಯಗಳೂ ಇವೆ.
ಜಾಮ್‌ನಗರದ ರಾಜಮನೆತನವು ಕ್ರಿಕೆಟ್‌ನಲ್ಲಿ ಶ್ರೀಮಂತ ಪರಂಪರೆ ಹೊಂದಿದೆ. ಪ್ರತಿಷ್ಠಿತ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿಯನ್ನು ಕ್ರಮವಾಗಿ ಜಡೇಜಾ ಸಂಬಂಧಿಕರಾದ ಕೆಎಸ್ ರಂಜಿತ್‌ಸಿನ್‌ಜಿ ಮತ್ತು ಕೆಎಸ್ ದುಲೀಪ್‌ಸಿನ್‌ಜಿ ಹೆಸರನ್ನು ಇಡಲಾಗಿದೆ. ಇದೇ ಕುಟುಂಬಕ್ಕೆ ಸೇರಿದ ಅಜಯ್ ಜಡೇಜಾ 1992 ರಿಂದ 2000ರವರೆಗೆ ಭಾರತವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಅವರು 15 ಟೆಸ್ಟ್ ಪಂದ್ಯಗಳನ್ನು ಮತ್ತು 196 ODI ಪಂದ್ಯಗಳನ್ನು ಆಡಿದ್ದಾರೆ.
ಕ್ರಿಕೆಟ್ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣವೆಂದರೆ 1996ರಲ್ಲಿ ನಡೆದ ವಿಶ್ವಕಪ್ ಕ್ವಾರ್ಟರ್-ಫೈನಲ್. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಜಡೇಜಾ ಕೇವಲ 25 ಎಸೆತಗಳಲ್ಲಿ 45 ರನ್ ಗಳಿಸಿದ್ದರು. ಬ್ಯಾಟಿಂಗ್ ಹೊರತಾಗಿ ಜಡೇಜಾ ಫೀಲ್ಡಿಂಗ್ನಲ್ಲೂ ಹೆಸರು ಮಾಡಿದ್ದರು.
ಯಾರು ಅಜಯ್ ಜಡೇಜಾ?:
ಅಜಯ್ ಜಡೇಜಾ ಅವರ ತಂದೆ ದೌಲತ್‌ಸಿನ್ಹಜಿ ಜಡೇಜಾ, ಜಾಮ್‌ನಗರ ಲೋಕಸಭೆಯಿಂದ ಮೂರು ಬಾರಿ ಸಂಸದರಾಗಿದ್ದರು. ಅವರ ತಾಯಿ ಕೇರಳದ ಅಲಪ್ಪುಳ ಮೂಲದವರು. ಜಡೇಜಾ ಜಯಾ ಜೇಟ್ಲಿ ಅವರ ಪುತ್ರಿ ಅದಿತಿ ಜೇಟ್ಲಿ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಐಮಾನ್ ಮತ್ತು ಅಮೀರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿರುವ 53 ವರ್ಷದ ಜಡೇಜಾ ಅವರು ಜಾಮ್‌ನಗರ ರಾಜಮನೆತನದ ವಂಶಸ್ಥರು. ಅವರು 1971 ರಲ್ಲಿ ನವನಗರ ಎಂದು ಕರೆಯಲ್ಪಡುವ ಜಾಮ್‌ನಗರದಲ್ಲಿ ದೌಲತ್‌ಸಿನ್ಹಜಿ ಜಡೇಜಾ ಅವರ ಪುತ್ರನಾಗಿ ಜನಿಸಿದರು. ಅವರ ತಂದೆ ಶತ್ರಿಸಲ್ಯಸಿಂಹಜಿಯವರ ಸೋದರಸಂಬಂಧಿಯಾಗಿದ್ದು, ಅವರು ಶುಕ್ರವಾರ ತಡರಾತ್ರಿ ಪತ್ರದ ಮೂಲಕ ಪ್ರಕಟಿಸಿದ್ದಾರೆ.
Leave a Comment