Paris Olympics : ಪದಕದ ಖಾತೆ ತೆರೆದ ಭಾರತ – ಕಳೆದ ಬಾರಿ ನಿರಾಸೆ ಅನುಭವಿಸಿದ್ದ ಮನು ಭಾಕರ್ ಗೆ ಕಂಚು

Spread the love

ನ್ಯೂಸ್ ಆ್ಯರೋ : 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 10 ಮೀಟರ್ ವನಿತಾ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮನು ಭಾಕರ್ ಅವರು ಕಂಚು ಗೆದ್ದು ಸಂಭ್ರಮಿಸಿದ್ದಾರೆ.

ಕೊರಿಯಾ, ಚೀನಾ ಆಟಗಾರರ ಹೋರಾಟದ ನಡುವೆ ಅಚಲವಾದ ಆತ್ಮ ವಿಶ್ವಾಸವನ್ನು ಪ್ರದರ್ಶಿಸಿದ ಮನು ಭಾಕರ್ 10 ಮೀಟರ್ ವನಿತಾ ಏರ್ ಪಿಸ್ತೂಲ್ ಫೈನಲ್‌ ನಲ್ಲಿ ಮೂರನೇ ಸ್ಥಾನಿಯಾದರು. 221.7 ಅಂಕ ಪಡೆದರು. ಕೊರಿಯಾದ ಇಬ್ಬರು ಮೊದಲೆರಡು ಸ್ಥಾನ ಪಡೆದರು.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಿಸ್ತೂಲ್ ಕೈಕೊಟ್ಟ ಕಾರಣ ನಿರಾಸೆ ಅನುಭವಿಸಿದ್ದ ಮನು ಈ ಬಾರಿ ಪದಕಕ್ಕೆ ಗುರಿಯಿಟ್ಟು ಭಾರತದ ಧ್ವಜ ರಾರಾಜಿಸುವಂತೆ ಮಾಡಿದರು. ಈ ಮೂಲಕ ಒಲಿಂಪಿಕ್ ಶೂಟಿಂಗ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ವನಿತಾ ಶೂಟರ್ ಎಂಬ ದಾಖಲೆಯನ್ನು 22ರ ಹರೆಯದ ಶೂಟರ್ ಬರೆದರು.

ಭಾಕರ್ ಅವರು ಆರಂಭದಿಂದ ಅಂತ್ಯದವರೆಗೆ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಂಡರು. ಅತ್ಯುತ್ತಮ ಕೌಶಲ್ಯ ಮತ್ತು ಹಿಡಿತವನ್ನು ತೋರಿಸಿದ ಭಾಕರ್ ಟಾಪ್ 3 ರಲ್ಲಿ ಮೂಡಿ ಬಂದರು.

ಅಂತಿಮ ಹೊಡೆತಕ್ಕೆ ಎರಡನೇ ಹೆಡ್ಡಿಂಗ್‌ನಲ್ಲಿ ಭಾಕರ್ 0.1 ಮುಂದಿದ್ದರು, ಆದರೆ ಅದರ ನಂತರ ಮೂರನೇ ಸ್ಥಾನಕ್ಕೆ ಜಾರಿದರು. ಭಾಕರ್ ಅವರು 221.7 ಅಂಕಗಳನ್ನು ಗಳಿಸಿದರು, ಅವರ ಅಂತಿಮ ಹೊಡೆತದಲ್ಲಿ 10.3 ಅನ್ನು ಹೊಡೆದರು, ಬೆಳ್ಳಿ ಪದಕ ವಿಜೇತ ಯೆಜಿ ಕಿಮ್ 10.5 ಗೆ ಹೊಡೆದಿದ್ದರಿಂದ ಭಾಕರ್ ಅಂತಿಮವಾಗಿ ಮೂರನೇ ಸ್ಥಾನ ಪಡೆದರು.

ಹರ್ಯಾಣದ ಮನು ಭಾಕರ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್. ಒಟ್ಟಾರೆ ರಾಜ್ಯವರ್ಧನ್ ಸಿಂಗ್ ರಾಥೋಡ್ (2004), ಅಭಿನವ್ ಬಿಂದ್ರಾ (2008), ವಿಜಯ್ ಕುಮಾರ್ (2012) ಮತ್ತು ಗಗನ್ ನಾರಂಗ್ (2012) ನಂತರ ಒಲಿಂಪಿಕ್ಸ್‌ ನಲ್ಲಿ ಪದಕ ಗೆದ್ದ ಭಾರತದಿಂದ ಐದನೇ ಶೂಟರ್ ಆಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಿಸ್ತೂಲ್ ಕೈಕೊಟ್ಟ ಕಾರಣದಿಂದ ಮನು ಭಾರಿ ನಿರಾಸೆ ಅನುಭವಿಸಿದ್ದರು. ಇದೀಗ ಪದಕ ಗೆದ್ದು ಮಿಂಚಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಟೋಕಿಯೊದ ನಂತರ ನಾನು ತುಂಬಾ ನಿರಾಶೆಗೊಂಡಿದ್ದೆ. ಅದರಿಂದ ಹೊರಬರಲು ನನಗೆ ಬಹಳ ಸಮಯ ಹಿಡಿಯಿತು. ಇಂದು ನಾನು ಎಷ್ಟು ಸಂತಸಗೊಂಡಿದ್ದೇನೆ ಎಂದು ನಾನು ವಿವರಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

Leave a Comment

Leave a Reply

Your email address will not be published. Required fields are marked *