IND vs SL ODI SERIES ; ಮತ್ತೆ ಶ್ರೀಲಂಕಾದ ಸ್ಪಿನ್ ದಾಳಿಗೆ ತರಗೆಲೆಯಂತೆ ಉದುರಿದ ಟೀಂ ಇಂಡಿಯಾ – ಲಂಕನ್ನರಿಗೆ 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆಲುವು
ನ್ಯೂಸ್ ಆ್ಯರೋ : ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಸರಣಿ ಸೋಲಿನ ಸಂಕಷ್ಟಕ್ಕೆ ಸಿಲುಕಿದೆ.
ಮೊದಲ ಪಂದ್ಯ ಟೈ ಆಗಿದ್ದರೆ, ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿಯಾಗಿ ಗೆದ್ದಿತ್ತು. ಸರಣಿ ಸಮಬಲಗೊಳಿಸುವ ಅವಕಾಶವಿದ್ದ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ ದಾಳಿಗೆ ತರಗೆಲೆಯಂತೆ ಉದುರಿದ ಭಾರತದ ಬಲಿಷ್ಠ ಬ್ಯಾಟ್ಸ್‌ಮನ್ ಗಳು ಪೆವಿಲಿಯನ್ ಪೆರೇಡ್ ನಡೆಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 248 ರನ್ ಕಲೆಹಾಕಿತು. ಶ್ರೀಲಂಕಾ ಪರ ಆವಿಷ್ಕಾ ಫೆರ್ನಾಂಡೋ 96 ರನ್ ಗಳಿಸಿ ಶತಕ ವಂಚಿತರಾದರೆ, ಕುಸಲ್ ಮೆಂಡಿಸ್ 59 ರನ್ ಗಳ ಕಾಣಿಕೆ ನೀಡಿದರು. ಇನ್ನು ಆರಂಭಿಕ ಪತ್ತುಮ್ ನಿಸ್ಸಂಕ 45 ರನ್ ಗಳಿಸಿ ಆವಿಷ್ಕಾಗೆ ಉತ್ತಮ ಸಾಥ್ ನೀಡಿದರು.
ಇನಿಂಗ್ಸ್ ಕೊನೆಯಲ್ಲಿ ಕಮಿಂದು ಮೆಂಡಿಸ್ 23 ರನ್ ಗಳ ಅಮೂಲ್ಯ ಕೊಡುಗೆ ನೀಡಿದರು. ಟೀಂ ಇಂಡಿಯಾ ಪರ ಪದಾರ್ಪಣೆಗೈದ ರಿಯಾನ್ ಪರಾಗ್ ಮೂರು ವಿಕೆಟ್ ಕಿತ್ತು ಯಶಸ್ವಿ ಬೌಲರ್ ಅನಿಸಿಕೊಂಡರು.
ಗೆಲುವಿಗೆ 249 ರನ್ ಗಳ ಸವಾಲಿನ ಮೊತ್ತ ಪೇರಿಸಬೇಕಿದ್ದ ಟೀಂ ಇಂಡಿಯಾಗೆ ಗಿಲ್ ರೂಪದಲ್ಲಿ ಆರಂಭಿಕ ಆಘಾತ ಎದುರಾದರೆ, ಎರಡೂ ಪಂದ್ಯದಲ್ಲಿ ಮಿಂಚಿದ್ದ ನಾಯಕ ರೋಹಿತ್ ಶರ್ಮಾ ಇಂದು ಬೇಗನೇ ನಿರ್ಗಮಿಸುವುದರೊಂದಿಗೆ ಟೀಂ ಇಂಡಿಯಾ ಪತನದ ಹಾದಿ ಹಿಡಿಯಿತು. ಏಳು ಆಟಗಾರರು ಎರಡಂಕಿ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದು, ಸೋಲಿಗೆ ಕಾರಣವಾಯಿತು.
ಎಲ್ಲಾ ಬ್ಯಾಟ್ಸ್‌ಮನ್ ಗಳು ಶ್ರೀಲಂಕಾದ ಸ್ಪಿನ್ ಬೌಲಿಂಗ್ ದಾಳಿಗೆ ಬ್ಯಾಟಿಂಗ್ ಮರೆತಂತೆ ಆಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಯಾರೂ ಜೊತೆಯಾಟ ನೀಡದೇ ವಿಕೆಟ್ ಚೆಲ್ಲಿದ್ದು ಭಾರತ ಬೇಗನೇ ಗಂಟುಮೂಟೆ ಕಟ್ಟಲು ಪ್ರಮುಖ ಕಾರಣವಾಯಿತು. ಕೇವಲ 26.1 ಓವರ್ ಗಳಲ್ಲಿ 138 ರನ್ ಗೆ ಸರ್ವಪತನ ಕಂಡ ಟೀಂ ಇಂಡಿಯಾ 110 ರನ್ ಗಳ ಹೀನಾಯ ಸೋಲನುಭವಿಸಿದರೆ 27 ವರ್ಷಗಳ ಬಳಿಕ ಶ್ರೀಲಂಕಾ ತಂಡ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದು ಬೀಗಿತು.
ಶ್ರೀಲಂಕಾ ಪರ ದುನಿತ್ ವೆಲ್ಲಲಗೆ ಐದು ವಿಕೆಟ್ ಕಿತ್ತರೆ, ತೀಕ್ಷಣ ಹಾಗೂ ವಾಂಡರ್ಸೆ ತಲಾ ಎರಡು ಕಬಳಿಸಿದರು. ಉಳಿದೊಂದು ವಿಕೆಟ್ ಅಸಿತಾ ಫೆರ್ನಾಂಡೋ ಪಾಲಾಯಿತು.
Leave a Comment