
Kiccha Birthday Special : ಮತ್ತೊಮ್ಮೆ ಮಾಸ್ ಅವತಾರದಲ್ಲಿ ಕಿಚ್ಚ ಸುದೀಪ್ – ಕಿಚ್ಚನ ಹೊಸ ಪ್ಯಾನ್ ಇಂಡಿಯಾ ಚಿತ್ರದ ಶೀರ್ಷಿಕೆ ಏನ್ ಗೊತ್ತಾ?
- ಮನರಂಜನೆ
- September 2, 2023
- No Comment
- 47
ನ್ಯೂಸ್ ಆ್ಯರೋ : ಪ್ಯಾನ್ ಇಂಡಿಯಾ ಸ್ಟಾರ್, ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದ ಅಂಗವಾಗಿ ಅವರು ಅಭಿನಯಿಸುತ್ತಿರುವ ಚಿತ್ರತಂಡಗಳು ಪೋಸ್ಟರ್, ಟೀಸರ್ ಬಿಡುಗಡೆ ಮಾಡಿ ಶುಭಾಶಯ ತಿಳಿಸುತ್ತಿವೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ಟೀಸರ್ ಬಿಡುಗಡೆ ಮಾಡಿ ತೀವ್ರ ಕುತೂಹಲ ಮೂಡಿಸಿದ್ದ ‘ಕೆ46’ ಚಿತ್ರ ತಂಡ ಶೀರ್ಷಿಕೆ ಬಹಿರಂಗ ಪಡಿಸಿ ಅಭಿಮಾನಿಗಳ ನಿರೀಕ್ಷೆ ಇನ್ನೂ ಹೆಚ್ಚಿಸಿದೆ.
ಗಮನ ಸೆಳೆದ ಶೀರ್ಷಿಕೆ
ಚಿತ್ರಕ್ಕೆ ‘ಮ್ಯಾಕ್ಸ್’ ಎಂದು ಶೀರ್ಷಿಕೆ ಇಡಲಾಗಿದೆ. ಈ ಮೂಲಕ ಸುದೀಪ್ ಮತ್ತೊಂದು ಮಾಸ್ ಚಿತ್ರದ ಮೂಲಕ ಪ್ರತ್ಯಕ್ಷವಾಗಲಿದ್ದಾರೆ ಎನ್ನುವುದು ಖಚಿತವಾದಂತಾಗಿದೆ. ಆ್ಯಕ್ಷನ್ ಥ್ರಿಲ್ಲರ್ ಆಗಿರುವ ಇದು ಕನ್ನಡ ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿಯಲ್ಲೂ ತೆರೆಗೆ ಬರಲಿದೆ. ಕಳೆದ ವರ್ಷ ಬಿಡುಗಡೆಯಾದ ಸುದೀಪ್ ಚಿತ್ರ ‘ವಿಕ್ರಾಂತ್ ರೋಣ’ವೂ ಪ್ಯಾನ್ ಇಂಡಿಯಾದಲ್ಲಿ ತೆರೆಕಂಡಿತ್ತು. ಇದೀಗ ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
‘ಮ್ಯಾಕ್ಸ್’ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆ ಟೀಸರ್ ನಲ್ಲಿ ‘ಮ್ಯಾಕ್ಸ್’ ತುಂಬಾ ಅಪಾಯಕಾರಿ ಎನ್ನುವುದನ್ನು ಹೇಳಲಾಗಿದ್ದು, ಅಭಿಮಾನಿಗಳು ಈಗಲೇ ಭರ್ಜರಿ ಫೈಟಿಂಗ್ ದೃಶ್ಯಗಳ ನಿರೀಕ್ಷೆಯಲ್ಲಿದ್ದಾರೆ.
ಮತ್ತೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ಸುದೀಪ್ ಮತ್ತೆ ಪೊಲೀಸ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದರ ಸೂಚನೆ ಸಿಕ್ಕಿದೆ. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ‘ಮ್ಯಾಕ್ಸ್’ ಚಿತ್ರ ನಿರ್ಮಾಣವಾಗುತ್ತಿದೆ. ಕಲೈಪುಲಿ ಎಸ್.ಧಾನು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ.