ಶೃಂಗೇರಿ ಮಠದಲ್ಲಿ ವಸ್ತ್ರ ಸಂಹಿತೆ ಜಾರಿಗೆ ವಿಹಿಂಪ ಸ್ವಾಗತ – ರಾಜ್ಯಾದ್ಯಂತ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ಮನವಿ ಮಾಡಿದ ಶರಣ್ ಪಂಪ್ ವೆಲ್
ನ್ಯೂಸ್ ಆ್ಯರೋ : ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆಯನ್ನು ಜಾರಿ ಮಾಡಬೇಕೆಂದು ಕರ್ನಾಟಕ ವಿಶ್ವ ಹಿಂದೂ ಪರಿಷದ್ ಇದರ ಸಹ ಕಾರ್ಯದರ್ಶಿ ಶರಣ್ ಕುಮಾರ್ ಪಂಪ್ ವೆಲ್ ಮನವಿ ಮಾಡಿದ್ದಾರೆ.
ಈಗಾಗಲೇ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರ ಶೃಂಗೇರಿ ಶ್ರೀ ಶಂಕರ ಮಠದವರು ವಸ್ತ್ರ ಸಂಹಿತೆ ಯನ್ನು ಜಾರಿ ಮಾಡಿದ್ದು, ಕ್ಷೇತ್ರಕ್ಕೆ ಬರುವವರು ಹಿಂದೂ ಸಂಪ್ರದಾಯದಂತೆ ಉಡುಗೆ ತೊಡುಗೆ ಧರಿಸಿ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರ ನಿರ್ಧಾರವನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ.
ಶೃಂಗೇರಿ ಮಠದ ಈ ವಸ್ತ್ರ ಸಂಹಿತೆಯ ಮಾದರಿಯಲ್ಲಿ ಮುಂಬರುವ ದಿನಗಳಲ್ಲಿ ಕರ್ನಾಟಕದ ಎಲ್ಲಾ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಒಳಪಟ್ಟ ಎಲ್ಲ ದೇವಸ್ಥಾನಗಳಲ್ಲಿ ಆಗಮಿಸುವ ಭಕ್ತರಿಗೆ ಧಾರ್ಮಿಕ ವಸ್ತ್ರ ಸಂಹಿತೆಯನ್ನು ಸಮಸ್ತ ಹಿಂದೂ ಸಮಾಜದ ಪರವಾಗಿ ವಿಶ್ವ ಹಿಂದೂ ಪರಿಷದ್ ರಾಜ್ಯದ ಎಲ್ಲ ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ದತ್ತಿ ಇಲಾಖೆಗೆ ಸಂಬಂಧ ಪಟ್ಟ ದೇವಸ್ಥಾನಗಳಿಗೆ ಜಾರಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಶರಣ್ ಕುಮಾರ್ ಪಂಪ್ ವೆಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment