ವಿಜಯಪುರದಲ್ಲಿ ಘೋರ ದುರಂತ; 4 ಮಕ್ಕಳ ಜೊತೆ ಕಾಲುವೆಗೆ ಹಾರಿದ ತಾಯಿ

ನ್ಯೂಸ್ ಆ್ಯರೋ: ತಾಯಿಯೊಬ್ಬಳು 4 ಮಕ್ಕಳನ್ನು ಕಾಲುವೆಗೆ ಎಸೆದು ತಾನೂ ಜೀವ ಬಿಡಲು ಯತ್ನಿಸಿದ್ದಾಳೆ. ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಈ ದಾರುಣ ಘಟನೆ ನಡೆದಿದೆ. 5 ವರ್ಷದ ತನು ಲಿಂಗರಾಜ್ ಭಜಂತಿ, 3 ವರ್ಷದ ರಕ್ಷಾ ಲಿಂಗರಾಜ್ ಭಜಂತ್ರಿ ಹಾಗೂ 13 ತಿಂಗಳ ಅವಳಿ ಜವಳಿ ಹಸೇನ ಹಾಗೂ ಹುಸೇನ ನೀರಿನಲ್ಲಿ ಮುಳುಗಿ ಉಸಿರು ಬಿಟ್ಟಿದ್ದಾರೆ.
ಕಾಲುವೆಗೆ ಮಕ್ಕಳು ಬಿದ್ದ ಬಳಿಕ ತಾಯಿಯೂ ಹಾರಿದ್ದಾರೆ. ಈ ದುರಂತ ನೋಡಿದ ಸ್ಥಳೀಯರು ತಾಯಿಯನ್ನು ಕಾಪಾಡಿದ್ರೆ 4 ಮಕ್ಕಳು ಜಲಸಮಾಧಿ ಆಗಿದ್ದಾರೆ. ಈ ಘಟನೆಯ ಬಗ್ಗೆ ನಿಡಗುಂದಿ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಕುಟುಂಬಸ್ಥರು ಕಾರಣ ಏನು ಅನ್ನೋದನ್ನ ಹೇಳಿ ಕಣ್ಣೀರಿಟ್ಟಿದ್ದಾರೆ.
ಲಿಂಗರಾಜ್ ಭಜಂತ್ರಿ ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿತ್ತು. ಗಂಡನಿಗೆ ಆತನ ತಂದೆ ಆಸ್ತಿ ಕೊಡಲ್ಲ ಎಂದಾಗ ಕುಟುಂಬಸ್ಥರು ಮನೆ ಬಿಟ್ಟು ಹೊರಗೆ ಹಾಕ್ತೀವಿ ಎಂದಿದ್ದರು. ಇದರಿಂದ ನೊಂದಿದ್ದ ದಂಪತಿ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಕಸಬಾ ಗ್ರಾಮಕ್ಕೆ ಹೊರಟಿದ್ದರು.
ಆಸ್ತಿ ಸಿಗದ ಹಿನ್ನೆಲೆಯಲ್ಲಿ ಲಿಂಗರಾಜ್, ಭಾಗ್ಯಮ್ಮ ಕುುಟಂಬ ದುಡಿಯಲೆಂದು ಲಿಂಗಸೂರು ಕಡೆಗೆ ಹೊರಟಿತ್ತು. 4 ಮಕ್ಕಳ ಜೊತೆ ಲಿಂಗರಾಜ್ ಹೊರಟಿದ್ದಾಗ ಆಲಮಟ್ಟಿ ಎಡದಂಡೆ ಕಾಲುವೆ ಬಳಿ ಬೈಕ್ ಪೆಟ್ರೋಲ್ ಖಾಲಿ ಆಗಿದೆ. ಆಗ ಮಕ್ಕಳು ಹಾಗೂ ಪತ್ನಿಯನ್ನ ಬಿಟ್ಟು ಪೆಟ್ರೋಲ್ ತರಲು ಹೋಗಿದ್ದಾರೆ. ವಾಪಸ್ ಬರೋ ಹೊತ್ತಿಗೆ ಈ ದುರ್ಘಟನೆ ನಡೆದಿದೆ.
Leave a Comment