ಇನ್ಮುಂದೆ ಜಿಯೋದಲ್ಲಿ ಐಪಿಎಲ್ ಬರಲ್ಲ; ಹಾಗಾದ್ರೆ ಎಲ್ಲಿ ನೇರಪ್ರಸಾರ ನೋಡುವುದು ?
ನ್ಯೂಸ್ ಆ್ಯರೋ: ಇನ್ನು ಮುಂದೆ ಐಪಿಎಲ್ ಸೇರಿದಂತೆ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದ್ದ ಎಲ್ಲಾ ಕ್ರೀಡೆಗಳ ನೇರ ಪ್ರಸಾರ ಹಾಟ್‌ಸ್ಟಾರ್‌ನಲ್ಲಿ ಮಾತ್ರ ಪ್ರಸಾರವಾಗಲಿದೆ.
ಡಿಸ್ನಿ-ರಿಲಯನ್ಸ್ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲಾ ಲೈವ್‌ಸ್ಟ್ರೀಮ್‌ಗಳು ಹಾಟ್‌ಸ್ಟಾರ್‌ನಲ್ಲಿ ಮಾತ್ರ ಪ್ರಸಾರವಾಗಲಿದೆ ಎಂದು ಮೂಲಗಳನ್ನುಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. ಈ ವಿಚಾರದ ಬಗ್ಗೆ ಎರಡೂ ಕಂಪನಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.
ಮುಂದಿನ ಜನವರಿಯಲ್ಲಿ ವಿಲೀನ ಪ್ರಕ್ರಿಯೆ ಪೂರ್ಣವಾಗಲಿದೆ. ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜಿಯೋ ಸಿನಿಮಾದಲ್ಲಿರುವ ಕ್ರೀಡೆಗಳ ವಿಡಿಯೋಗಳು ಹಾಟ್‌ಸ್ಟಾರ್‌ನಲ್ಲಿ ಇರುತ್ತಾ ಅಥವಾ ಜಿಯೋ ಸಿನಿಮಾದಲ್ಲೇ ಇರುತ್ತಾ ಎನ್ನುವುದು ದೃಢಪಟ್ಟಿಲ್ಲ.
ಕಳೆದ ಫೆಬ್ರವರಿಯಲ್ಲಿ ವಯಾಕಾಮ್ 18 ಮೀಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ 70 ಸಾವಿರ ಕೋಟಿ ರೂ. ಮೊತ್ತದ ಜಂಟಿ ಉದ್ಯಮಕ್ಕೆ ಸಹಿ ಹಾಕಿದ್ದವು. ಈ ವಹಿವಾಟಿನ ಭಾಗವಾಗಿ ವಯಾಕಾಮ್ 18ಕ್ಕೆ ಸೇರಿದ ಮಾಧ್ಯಮ ಸಂಸ್ಥೆಗಳನ್ನು ಕೋರ್ಟ್ ಅನುಮೋದಿತ ವ್ಯವಸ್ಥೆ ಮೂಲಕ ಸ್ಟಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲು ಅನುಮತಿ ಸಿಕ್ಕಿತ್ತು.
ರಿಲಯನ್ಸ್ ಇಂಡಸ್ಟ್ರೀಸ್, ವಯಾಕಾಮ್ 18 ಮೀಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ವಿಲೀನದ ಭಾಗವಾಗಿ ಪರವಾನಗಿಯನ್ನು ಸ್ಟಾರ್ ಇಂಡಿಯಾಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್ 27 ರಂದು ಅನುಮೋದನೆ ನೀಡಿತ್ತು. ಪರವಾನಗಿ ಹಸ್ತಾಂತರಕ್ಕೆ ಅನುಮೋದನೆ ನೀಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದು ಭಾರತೀಯ ಸ್ಪರ್ಧಾತ್ಮಕ ಆಯೋಗವು ವಿಧಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಿತ್ತು.
ಡಿಸ್ನಿ ಮತ್ತು ರಿಲಯನ್ಸ್ ನಡುವಿನ ವಿಲೀನ ಒಪ್ಪಂದದಿಂದಾಗಿ 120 ಟಿವಿ ಚಾನೆಲ್‌ಗಳು ಮತ್ತು ಎರಡು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳೊಂದಿಗೆ ಭಾರತದ ಅತಿದೊಡ್ಡ ಮನರಂಜನಾ ಕಂಪನಿಯಾಗಿ ಹೊರಹೊಮ್ಮಿದೆ. ರಿಲಯನ್ಸ್ ಜಿಯೋ ಸಿನಿಮಾ ಐಪಿಎಲ್ ಕ್ರಿಕೆಟ್, ಚಳಿಗಾಲದ ಒಲಿಂಪಿಕ್ಸ್, ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಹಕ್ಕು ಹೊಂದಿದೆ. ಡಿಸ್ನಿ ಹಾಟ್‌ಸ್ಟಾರ್ ಐಸಿಸಿ ಆಯೋಜಿಸುವ ಕ್ರಿಕೆಟ್ ಪಂದ್ಯಗಳು, ಇಂಗ್ಲಿಷ್ ಪ್ರೀಮಿಯರ್ ಲೀಗ್, ದೇಶೀಯ ಪ್ರೊ ಕಬಡ್ಡಿ ಲೀಗ್‌ನ ಹಕ್ಕುಗಳನ್ನು ಹೊಂದಿದೆ.
ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ಕ್ರಿಕೆಟ್ ವೀಕ್ಷಸಬೇಕಾದರೆ ಸಬ್‌ಸ್ಕ್ರೈಬ್ ಆಗಬೇಕಿತ್ತು. ಆದರೆ 2023 ರಲ್ಲಿ ಜಿಯೋ ರೈಟ್ಸ್ ಪಡೆದ ನಂತರ ಐಪಿಎಲ್ ಲೈವ್ ಸ್ಟ್ರೀಮಿಂಗ್ ಉಚಿತವಾಗಿ ನೀಡಿತ್ತು. ಇದರಿಂದಾಗಿ ಐಪಿಎಲ್ ವೀಕ್ಷಕರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು.
Leave a Comment