Paris Olympics 2024 : ಭಾರತಕ್ಕೆ ಮತ್ತೊಂದು ಕಂಚಿನ ಪದಕ – ಮೋಡಿ ಮಾಡಿದ ಮನು ಭಾಕರ್ & ಸರಬ್ಜೋತ್ ಸಿಂಗ್ ಜೋಡಿ

20240730 132938
Spread the love

ನ್ಯೂಸ್ ಆ್ಯರೋ : ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಮೊನ್ನೆಯಷ್ಟೇ ಭಾರತಕ್ಕೆ ಪದಕದ ಪಟ್ಟಿಯಲ್ಲಿ ಸ್ಥಾನ ಒದಗಿಸಿದ್ದ ಮನು ಭಾಕರ್ ಅವರು ಸರಬ್ಜೋತ್‌ ಸಿಂಗ್‌ ಅವರ ಜೊತೆಗೆ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡದಲ್ಲಿ ಭಾಗವಹಿಸಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಭಾರತ ಈ ಕೂಟದಲ್ಲಿ ಎರಡನೇ ಕಂಚಿನ ಪದಕ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಮೊದಲು ಮಹಿಳೆಯರ 10 ಮೀ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಮನು ಭಾಕರ್, ಇದೀಗ ಮಿಶ್ರ ತಂಡ ವಿಭಾಗದಲ್ಲೂ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಹಿರಿಮೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.

ಆರಂಭದಿಂದಲೇ ಮುನ್ನಡೆ ಕಾಯ್ದಕೊಂಡು ಸಾಗಿದ ಭಾರತ ಜೋಡಿ 16-10 ಅಂತರದಿಂದ ಕೊರಿಯಾ ಮಿಶ್ರ ತಂಡವನ್ನು ಮಣಿಸಿ ಕಂಚಿನ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಯಿತು.

ನಿನ್ನೆ ನಡೆದ ಅರ್ಹತಾ ಸುತ್ತಿನಲ್ಲಿ ಮನು-ಸರಬ್ಜೋತ್‌, 580 ಅಂಕಗಳೊಂದಿಗೆ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಟರ್ಕಿ ಜೋಡಿ 582, ಸರ್ಬಿಯಾ ಜೋಡಿ 581 ಅಂಕ ಗಳಿಸಿ ಅಗ್ರ-2 ಸ್ಥಾನ ಪಡೆದ ಕಾರಣ ಪದಕ ಖಚಿತಪಡಿಸಿತ್ತು. ಭಾರತ 580ರ ಬದಲು 583 ಅಂಕ ಗಳಿಸಿದ್ದರೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗುತಿತ್ತು. ಇದೇ ವೇಳೆ ದಕ್ಷಿಣ ಕೊರಿಯಾ 579 ಅಂಕ ಗಳಿಸಿ ಕಂಚಿನ ಪದಕ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!