ತುಳು ಸಿನಿಮಾ ನಟಿಯೊಂದಿಗೆ ನಿರ್ದೇಶಕ ತರುಣ್ ಸುಧೀರ್ ಮ್ಯಾರೇಜ್..!! – ನಿರ್ದೇಶಕನ ಜೊತೆ ಹಸೆಮಣೆ ಏರ್ತಾರಾ ಈ ಬೆಡಗಿ…??

ನ್ಯೂಸ್ ಆ್ಯರೋ : ಸೂಪರ್ ಹಿಟ್ ಚಿತ್ರ “ರಾಬರ್ಟ್” ಸಿನಿಮಾದ ನಾಯಕ ನಟ ಅತ್ತ ಜೈಲು ಸೇರಿರುವಂತೆ ಇತ್ತ ಅದರ ನಿರ್ದೇಶಕ ತರುಣ್ ಸುಧೀರ್ ಮದುವೆಗೆ ಮುಂದಾಗಿರುವ ಗುಸುಗುಸು ಹೊರಬಿದ್ದಿದೆ. ಅದೂ ಕೂಡ ತುಳು ಸಿನಿಮಾದಲ್ಲಿ ನಟಿಸಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ ಜೊತೆ ತರುಣ್ ಮದುವೆಯಾಗುತ್ತಿದ್ದಾರೆ ಅನ್ನೋದು ಹಾಟ್ ಟಾಪಿಕ್…!!
ನಿರ್ದೇಶಕ ತರುಣ್ ಸುಧೀರ್ ವಯಸ್ಸು 40 ಗಡಿಯಲ್ಲಿದೆ. ತಾಯಿ ಮಾಲತಿ ಕೂಡ ಮಗನಿಗೆ ಮದುವೆ ಮಾಡಬೇಕು ಎನ್ನುತ್ತಿರುತ್ತಾರೆ. ಆದರೆ ಸಿನಿಮಾ ಕೆಲಸಗಳಲ್ಲಿ ಮುಳುಗಿ ಹೋಗಿರುವ ತರುಣ್ ಸದ್ಯಕ್ಕೆ ಮದುವೆ ಆಲೋಚನೆ ಇಲ್ಲ, ಮದುವೆ ಆಗದೇ ನೆಮ್ಮದಿಯಾಗಿ ಇದ್ದೀನಿ ಎಂದು ತಮಾಷೆಯಾಗಿ ಹೇಳುತ್ತಾ ಬರುತ್ತಿದ್ದರು. ಆದರೆ ಇದೀಗ ಮದುವೆ ಫಿಕ್ಸ್ ಆಗೋಗಿದೆ. ಇನ್ನೆರಡು ತಿಂಗಳಲ್ಲಿ ಗಟ್ಟಿಮೇಳ ಕೇಳಲಿದೆ ಎನ್ನುವ ಊಹಾಪೋಹ ಶುರುವಾಗಿದೆ.
ತೆರೆಮರೆಯಲ್ಲಿ ತರುಣ್ ಸುಧೀರ್ ಮದುವೆ ಸಿದ್ಧತೆಗಳು ಶುರುವಾಗಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಆದರೆ ಅವರ ಆಪ್ತರಿಗೂ ಕೂಡ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಇದು ಕೇವಲ ಊಹಾಪೋಹ, ಜಸ್ಟ್ ಗಾಳಿಸುದ್ದಿ ಎನ್ನುವವರು ಇದ್ದಾರೆ. ಆದರೂ ಕೂಡ ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಎನ್ನುವವರೂ ಇದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಹುಟ್ಟಿ ಬೆಳೆದ ತರುಣ್ ಸುಧೀರ್ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿ ಒಂದು ವರ್ಷ ಅಶೋಕ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದರು. ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ಸಲಹೆಯಂತೆ ಚಿತ್ರರಂಗಕ್ಕೆ ಬಂದರು. ‘ಎಕ್ಸ್‌ಕ್ಯೂಸ್‌ಮಿ’ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದರು. ‘ರ್ಯಾಂಬೊ’ ಚಿತ್ರದ ಸಹ ನಿರ್ದೇಶಕರಾಗಿ ಕೆಲಸ ಮಾಡಿ ತರುಣ್ ‘ಚೌಕ’ ಚಿತ್ರದಿಂದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು.
ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಂಥೆರೊ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಈಗ ಕೇಳಿಬರ್ತಿದೆ. ತರುಣ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ರಾಘವ ವಿನೋದ್ ಪ್ರಭಾಕರ್ ಜೋಡಿ ತನು ಆಗಿ ಸೋನಲ್ ಮಿಂಚಿದ್ದರು. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. ‘ಅಭಿಸಾರಿಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಬಳಿಕ ಪಂಚತಂತ್ರ’, ‘ಡೆಮೊ ಪೀಸ್’, ‘ಗರಡಿ’ ಹಾಗೂ ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಲ್ಲಿ ಆಕೆ ಕಾಣಿಸಿಕೊಂಡಿದ್ದರು.
ಇದೀಗ ತರುಣ್- ಸೋನಲ್ ಮದುವೆ ಆಗುತ್ತಾರೆ ಎನ್ನುವ ಸುದ್ದಿಯನ್ನು ಯಾರು ಹಬ್ಬಿಸಿದರೋ ಗೊತ್ತಿಲ್ಲ. ಆದರೆ ಇಬ್ಬರೂ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆಗಸ್ಟ್ 10ಕ್ಕೆ ಮದುವೆ ಎನ್ನಲಾಗ್ತಿದೆ. ತರುಣ್ ಆಪ್ತರು ಕೂಡ ಈ ಬಗ್ಗೆ ಯಾವುದೇ ಸುಳಿವು ಇಲ್ಲ ಎನ್ನುತ್ತಿದ್ದಾರೆ. ಯಾರು ಇಂತಾದೊಂದು ವದಂತಿ ಹಬ್ಬಿಸಿದರೋ ಗೊತ್ತಿಲ್ಲ. ಇದೇ ವಿಚಾರ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡ್ತಿದೆ..!!
Leave a Comment