ಬಳ್ಳಾರಿ ಜೈಲಿನಿಂದ ಪತ್ನಿ ಜತೆ ಕಾರಿನಲ್ಲಿ ಹೊರಟ ದರ್ಶನ್; ಹಿಡುಗಾಯಿ ಹೊಡೆದು ದಾಸನಿಗೆ ದೃಷ್ಠಿ ತೆಗೆದ ಕುಟುಂಬಸ್ಥರು
ನ್ಯೂಸ್ ಆ್ಯರೋ: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಅನಾರೋಗ್ಯದ ಕಾರಣದಿಂದ ಅವರು ಜಾಮೀನು ಪಡೆದಿದ್ದಾರೆ. 4 ತಿಂಗಳಿಂದ ಜೈಲಿನಲ್ಲಿ ಕಂಬಿ ಎಣಿಸಿದ್ದ ದರ್ಶನ್ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ದರ್ಶನ್ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದು, ಬಳ್ಳಾರಿ ಜೈಲಿನಿಂದ ಅವರು ಹೊರಗೆ ಬಂದಿದ್ದಾರೆ. ಬಳ್ಳಾರಿಗೆ ತೆರಳಿರುವ ವಿಜಯಲಕ್ಷ್ಮಿ ಅವರು ಪತಿಯನ್ನು ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ಐಷಾರಾಮಿ ಕಾರಿನಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಕುಟುಂಬಸ್ಥರು ಹಿಡುಗಾಯಿ ಹೊಡೆದು ದಾಸನಿಗೆ ದೃಷ್ಠಿ ತೆಗೆದಿದ್ದಾರೆ.
ಕೋರ್ಟ್ ಆದೇಶದ ಪ್ರತಿಯನ್ನು ದರ್ಶನ್ ಅವರ ಸಂಬಂಧಿ ಸುಶಾಂತ್ ನಾಯ್ಡು ಅವರು ಬಳ್ಳಾರಿ ಜೈಲಿಗೆ ತಂದಿದ್ದರು. ಜೈಲು ಅಧೀಕ್ಷಕಿ ಲತಾಗೆ ಅವರಿಗೆ ಆದೇಶದ ಪ್ರತಿ ನೀಡಲಾಯಿತು. ಈ ಪ್ರಕ್ರಿಯೆ ನಡೆಯುವಾಗ ಜೈಲಿನ ಹೊರಗೆ ಕಾರಿನಲ್ಲಿ ಕುಳಿತು ವಿಜಯಲಕ್ಷ್ಮಿ ಅವರು ದರ್ಶನ್ಗಾಗಿ ಕಾಯುತ್ತಿದ್ದರು. ದರ್ಶನ್ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಅನೇಕ ಅಭಿಮಾನಿಗಳು ಜೈಲಿನ ಮುಂಭಾಗ ಜಮಾಯಿಸಿದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಬೆನ್ನು ನೋವಿನ ಕಾರಣದಿಂದ ದರ್ಶನ್ ಅವರಿಗೆ ಸರ್ಜರಿಯ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕಿದೆ. ವಿಚಾರಣಾಧೀನ ಖೈದಿಗೆ ಚಿಕಿತ್ಸೆ ಪಡೆಯುವ ಅವಕಾಶ ಇದೆ. ಹಾಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ನಿರ್ಧರಿಸಿದ್ದಾರೆ. ಒಂದು ದಿನ ಮನೆಯಲ್ಲಿ ಇದ್ದು, ನಂತರ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ.
Leave a Comment