ಉಪ ಚುನಾವಣೆ ಗೆದ್ದ ಮೇಲೆ ಮಹತ್ವದ ಬೆಳವಣಿಗೆ; ಪ್ರಧಾನಿ ಮೋದಿಗೆ ಸಿಎಂ ಸಿದ್ದು 6 ಡಿಮ್ಯಾಂಡ್!
ನ್ಯೂಸ್ ಆ್ಯರೋ: ರಾಜ್ಯದಲ್ಲಿ ಉಪಚುನಾವಣೆ ಗೆದ್ದಿರೋ ಕಾಂಗ್ರೆಸ್ ಹೊಸ ಹುಮ್ಮಸ್ಸಿನಲ್ಲಿದೆ. ಎದುರಾಳಿಗಳನ್ನ ಬಗ್ಗು ಬಡಿದಿರೋ ಹುರುಪಿನಲ್ಲಿ ಸಖತ್ ಆ್ಯಕ್ಟಿವ್ ಆಗಿದೆ. ಉಪಕದನ ಗೆಲ್ಲುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಯಾತ್ರೆ ಮಾಡಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಸಿದ್ದರಾಮಯ್ಯ ಪ್ರಧಾನಿ ಮೋದಿಯನ್ನೂ ಮೀಟ್ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಮಿನಿ ಸಮರ ಗೆದ್ದಾಯ್ತು. ಅಧಿಕಾರದ ಗದ್ದುಗೆಯನ್ನ ಭದ್ರಪಡಿಸಿಕೊಂಡಿದ್ದಾಯ್ತು. ಈಗೇನಿದ್ರು ಸಿದ್ದರಾಮಯ್ಯಗೆ ಆಡಳಿತವನ್ನ ಮತ್ತಷ್ಟು ಹುರುಪಿನಿಂದ ನಡೆಸುವ ಲೆಕ್ಕಾಚಾರ. ಈ ನಿಟ್ಟಿನಲ್ಲಿ ಸಂಪುಟ ಸರ್ಜರಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂಬ ಚರ್ಚೆ ಶುರುವಾಗಿದೆ. ಕ್ಯಾಬಿನೆಟ್ ಪುನಾರಚನೆ ಮಾಡಲು ಸಿಎಂ, ಡಿಸಿಎಂ ದೆಹಲಿಯಲ್ಲಿ ಸರ್ಕಸ್ ಮಾಡಿದ್ದಾರೆ ಎನ್ನಲಾಗಿತ್ತು. ಆದ್ರೀಗ ಸಂಪುಟ ಪುನಾರಚನೆ ಚರ್ಚೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.
ಉಪ ಸಮರ ಗೆದ್ದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಇದೇ ಮೊದಲ ಬಾರಿಗೆ ಡೆಲ್ಲಿ ಯಾತ್ರೆ ಮಾಡಿದ್ದಾರೆ. ಸಂಪುಟ ಸರ್ಜರಿ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಅಂತ ತಿಳಿದು ಬಂದಿತ್ತು. ಆದ್ರೀಗ ಸಂಪುಟ ಪುನಾರಚನೆ ಚರ್ಚೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬ್ರೇಕ್ ಹಾಕಿದ್ದಾರೆ. ಕ್ಯಾಬಿನೆಟ್ ವಿಸ್ತರಣೆ ಸದ್ಯಕ್ಕೆ ಮಾಡುತ್ತಿಲ್ಲ. ಪುನಾರಚನೆ ಸಂದರ್ಭ ಇನ್ನೂ ಬಂದಿಲ್ಲ ಎಂದು ಇಬ್ಬರೂ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮೋದಿಯನ್ನ ಭೇಟಿ ಮಾಡಿ ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಅಂತ ತಿಳಿದುಬಂದಿದೆ.
ಪ್ರಧಾನಿಗೆ ಸಿಎಂ 6 ಬೇಡಿಕೆ
- ನಬಾರ್ಡ್ ಸಾಲ ಕಡಿತ ಮಾಡಿದ್ದು, ಶೀಘ್ರ ಬಿಡುಗಡೆ ಮಾಡಿ
- ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆಗೆ ಸಿಎಂ ಮನವಿ
- ಮಹಾದಾಯಿ, ಮೇಕೆದಾಟು ಯೋಜನೆಗಳಿಗೆ ಅವಕಾಶ ಕೋರಿಕೆ
- ಬೆಂಗಳೂರು ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ನೆರವು ಕೋರಿಕೆ
- 15ನೇ ಹಣಕಾಸು ಯೋಜನೆ ವಿಶೇಷ ಅನುದಾನ ಬಿಡುಗಡೆ ಮಾಡಿ
- 16ನೇ ಹಣಕಾಸು ಯೋಜನೆಯಲ್ಲಿ ತೆರಿಗೆ ತಾರತಮ್ಯ ಆಗಬಾರದು
ಕೇಂದ್ರ ಸರ್ಕಾರ ಕಡಿತ ಮಾಡಿದ್ದ ನಬಾರ್ಡ್ ಸಾಲವನ್ನ ಶೀಘ್ರವೇ ಬಿಡುಗಡೆ ಮಾಡಿ ಅಂತ ಪ್ರಧಾನಿಗೆ ಸಿಎಂ ಮನವಿ ಮಾಡಿದ್ದಾರೆ. ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ.
ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಅವಕಾಶ ಮಾಡಿಕೊಡಿ. ಬೆಂಗಳೂರು ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ನೆರವು ಮಾಡಿ ಅಂತ ಕೋರಿಕೆ ಇಟ್ಟಿದ್ದಾರೆ. ಇನ್ನುಳಿದಂತೆ 15ನೇ ಹಣಕಾಸು ಯೋಜನೆ ವಿಶೇಷ ಅನುದಾನ ಬಿಡುಗಡೆ ಮಾಡಿ ಅಂತ ಮನವಿ ಮಾಡಿದ್ದಾರೆ. 16ನೇ ಹಣಕಾಸು ಯೋಜನೆಯಲ್ಲಿ ತೆರಿಗೆ ತಾರತಮ್ಯ ಆಗಬಾರದು ಅಂತ ಡಿಮ್ಯಾಂಡ್ ಇಟ್ಟಿದ್ದಾರೆ.
Leave a Comment