ಬಳ್ಳಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು ಕೇಸ್; ಈ ದುರಂತಕ್ಕೆ ಕಾರಣವಾದ ಶಾಕಿಂಗ್ ಅಂಶ ಬಯಲು !
ನ್ಯೂಸ್ ಆ್ಯರೋ: ಕೇವಲ 15 ದಿನಗಳ ಅಂತರದಲ್ಲಿ 5 ಮಂದಿ ಬಾಣಂತಿಯರ ಸಾವಿನ ಮೂಲಕ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಬಳ್ಳಾರಿ ಸರ್ಕಾರಿ ಆಸ್ಪತ್ರೆ ವಿಚಾರ ಇದೀಗ ಮತ್ತೆ ಸುದ್ದಿಯಾಗುತ್ತಿದೆ.
ಹೌದು.. ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಲ್ಲಿ ಐದು ಬಾಣಂತಿಯರ ಸಾವಿಗೆ ಕಾರಣವೇನು ಎಂಬುದು ಕೊನೆಗೂ ಬಹಿರಂಗವಾಗಿದ್ದು, ಬಾಣಂತಿಯರಿಗೆ ಸಿಸೇರಿಯನ್ ವೇಳೆ ನೀಡಿದ್ದ ಕಳಪೆ ಮಟ್ಟದ “IV ಗ್ಲೂಕೋಸ್” (ಇಂಟ್ರಾವೆನಸ್ ದ್ರಾವಣ) ನಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತನಿಖಾ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಕಾರಣವಾಗಿರುವುದು ಕಂಡುಬಂದರೆ ಅದನ್ನು ಪೂರೈಸಿರುವ ಕಂಪನಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ವಿಶ್ವವಿದ್ಯಾಲಯ ತಜ್ಞರ ತಂಡದ ಪರಿಶೀಲನೆಯಲ್ಲಿ ಆಸ್ಪತ್ರೆ ವೈದ್ಯರ ತಂಡದಿಂದ ಲೋಪ ಆಗಿಲ್ಲ ಎನ್ನುವುದು ಗೊತ್ತಾಗಿದೆ. ಆದರೆ, ಚಿಕಿತ್ಸೆಗೆ ಬಳಸಿರುವ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಮೇಲೆ ಶಂಕೆ ಇದೆ. ಅದರ ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದು ವಾರದಲ್ಲಿ ವರದಿ ಬರುತ್ತದೆ. ದೋಷ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
Leave a Comment