ಕಂಕನಾಡಿ ಮಗು ಅಪಹರಣ; 2 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು
ನ್ಯೂಸ್ ಆ್ಯರೋ : ಮನೆಯ ಹೊರಗಡೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಹೆಣ್ಣು ಮಗು ಅಪಹರಣವಾದ ಘಟನೆ ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಆ. 31 ರಂದು ನಡೆದಿದೆ.
ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರ ಮಗು ಶನಿವಾರ ಸಂಜೆ 4.30 ಗಂಟೆಗೆ ಕಾಣೆಯಾಗಿದೆ. ಎಲ್ಲ ಕಡೆ ಹುಡುಕಾಡಿ ಮಗುವಿನ ಸುಳಿವು ಸಿಗದ ಸಂದರ್ಭದಲ್ಲಿ ಹೆತ್ತವರು ಕಂಕನಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದ ಪೊಲೀಸರು ತತ್ ಕ್ಷಣವೇ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಂಕನಾಡಿ ರೈಲ್ವೆ ಜಂಕ್ಷನ್ ನ ಸಿಸಿಟಿವಿಯಲ್ಲಿ ವೃದ್ಧನೊಬ್ಬ ಮಗುವೊಂದನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಆ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕೇರಳ ಕಡೆಗೆ ಹೋಗುತ್ತಿದ್ದ ರೈಲಿನ ಬಗ್ಗೆ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆ ಕೂಡಲೇ ಕಾಸರಗೋಡು ರೈಲ್ವೆ ಪೊಲೀಸರು ಮಗು ಹಾಗೂ ವೃದ್ಧನನ್ನು ಸೆರೆ ಹಿಡಿದಿದ್ದು, ನಂತರ ಕಂಕನಾಡಿಯ ಪಿ.ಎಸ್.ಐ.ಶಿವಕುಮಾರ್ ಮತ್ತು ಸಿಬ್ಬಂದಿಗಳ ತಂಡ ರಾತ್ರಿ 9.30 ಕ್ಕೆ ಕಾಸರಗೋಡು ರೈಲ್ವೆ ಪೊಲೀಸರಿಂದ ಮಗು ಹಾಗೂ ವೃದ್ಧನನ್ನು ವಶಕ್ಕೆ ಪಡೆದು, ಮಗುವನ್ನು ಆ ಕೂಡಲೇ ಹೆತ್ತವರಿಗೆ ಒಪ್ಪಿಸಲಾಗಿದೆ.
ಆರೋಪಿಯನ್ನು ಕೇರಳದ ತಾತಾಪಿಲ್ಲಿಯ 49 ವಯಸ್ಸಿನ ಅನೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈಯಲ್ಲಿರುವ ತಾಯಿಯನ್ನು ಭೇಟಿಯಾಗಿ, ವಾಪಸ್ಸು ಮಂಗಳೂರು ರೈಲಿನಲ್ಲಿ ಬಂದಿಳಿದಿದ್ದಾನೆ. ಸಸ್ಯವನ ಮುಂಭಾಗದ ರಸ್ತೆಯಲ್ಲಿ ಸಾಗುತ್ತಿರುವಾಗ ರಸ್ತೆಯಲ್ಲಿ ಆಟವಾಡಿಕೊಂಡಿದ್ದ ಮಗುವನ್ನು ನೋಡಿ, ತನಗೆ 3 ಗಂಡು ಮಕ್ಕಳಿದ್ದು, ಹೆಣ್ಣು ಮಗು ಬೇಕೆಂಬ ಉದ್ದೇಶದಿಂದ ಕರೆದುಕೊಂಡು ಹೋಗಿರುವುದಾಗಿ ತನಿಖೆಯಲ್ಲಿ ಕಂಡು ಬಂದಿದೆ.
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ.ಅನುಪಮ್ ಅಗರವಾಲ್ ಮಾರ್ಗದರ್ಶನದಂತೆ, ಡಿ.ಸಿ.ಪಿ ಸಿದ್ದಾರ್ಥ್ ಗೋಯೆಲ್, ಕೆ.ಎಸ್.ಪಿ.ಎಸ್ ದಿನೇಶ್ ಕುಮಾರ್, ಮತ್ತು ಧನ್ಯಾ ನಾಯಕ್ ರವರ ನಿರ್ದೇಶನದಲ್ಲಿ, ಕಂಕನಾಡಿ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ರವರ ಸೂಚನೆಯಂತೆ ಪಿ.ಎಸೈ ಶಿವಕುಮಾರ್, ಎ.ಎಸ್ಐ ಅಶೋಕ್, ಸಿಬ್ಬಂದಿಗಳಾದ ಆಶಿತ್ ಡಿಸೋಜ, ಕುಶಾಲ್ ಹೆಗ್ಡೆ, ರಾಘವೇಂದ್ರ, ಪೂಜಾ ರವರು ಮಾಹಿತಿ ಬಂದ 2 ಗಂಟೆಯೊಳಗೆ ಕಾರ್ಯಾಚರಣೆ ನಡೆಸಿ ಅಪಹರಣವಾದ ಮಗುವನ್ನು ಪತ್ತೆ ಹಚ್ಚಿ ಹೆತ್ತವರಿಗೆ ಒಪ್ಪಿಸಿದ್ದಾರೆ.
Leave a Comment