ನಕಲಿ ಖಾತೆ ತೆರೆದು ವಂಚನೆ ಬೆದರಿಕೆ; ಸಿಬಿಐ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಗೆ ₹1.71 ಕೋಟಿ ನಾಮ
ನ್ಯೂಸ್ ಆ್ಯರೋ: ಸಿಬಿಐ ಅಧಿಕಾರಿಗಳೆಂದು ಹೆದರಿಸಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 1.71 ಕೋಟಿ ರೂ. ವಂಚಿಸಿದ ಬಗ್ಗೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 11ರಂದು ದೂರುದಾರರು ತನ್ನ ಮನೆಯಲ್ಲಿರುವಾಗ ಬೆಳಗ್ಗೆ 09:49ಕ್ಕೆ ಟ್ರಾಯ್ ಹೆಸರಿನಲ್ಲಿ ಕರೆ ಬಂದಿತ್ತು. ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದು, ಮುಂಬೈನ ಅಂಧೇರಿಯಲ್ಲಿ ಹಲವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಗೊತ್ತಾಗಿದೆ. ಮಾರ್ಕೆಟಿಂಗ್ ನೆಪದಲ್ಲಿ ನಿಮಗೆ ಸಂಬಂಧಿಸಿದ ಮೊಬೈಲ್ ನಂಬರಿನಿಂದ ಕಾಲ್ ಮಾಡಿ ಕಿರುಕುಳ ಕೊಡುತ್ತಿರುವುದರ ಬಗ್ಗೆ ಎಫ್ಐಆರ್ ದಾಖಲಾಗಿದೆ. ಕೂಡಲೇ ಅಂಧೇರಿ(E) ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು. ಇಲ್ಲದಿದ್ದರೆ, ನಿಮ್ಮ ಮೊಬೈಲ್ ನಂಬರ್ನ ಸೇವೆಯನ್ನು 2 ಗಂಟೆಗಳಲ್ಲಿ ಕಡಿತಗೊಳಿಸಲಾಗುವುದು’ ಎಂದು ಬೆದರಿಸಿದ್ದರು.
ಅಲ್ಲದೆ, ”ಈ ಬಗ್ಗೆ ಅಪರಿಚಿತರು ಪ್ರದೀಪ್ ಸಾವಂತ್ ಎಂಬವರಲ್ಲಿ ಮಾತನಾಡಿದಾಗ, ಆತನು ನರೇಶ್ ಗೋಯೆಲ್ ವಂಚನೆ ಪ್ರಕರಣವನ್ನು ಒಳಗೊಂಡಿರುವ ಮನಿ ಲಾಂಡರಿಂಗ್ ಕೇಸ್ನಲ್ಲಿ ಭಾಗಿಯಾಗಿರುವ ಬಗ್ಗೆ ಮತ್ತೊಂದು ಎಫ್ಐಆರ್ ಕೂಡ ದಾಖಲಾಗಿದೆ. ಅಂಧೇರಿಯ ಕೆನರಾ ಬ್ಯಾಂಕ್ನಲ್ಲಿ ದೂರುದಾರರ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದೆ. ಇದಕ್ಕೆ ಗುರುತು ಬಳಸಿ ಸಿಮ್ ಖರೀದಿಸಿರುವುದಾಗಿದ್ದು, ಹೀಗಾಗಿ ನಿಮ್ಮನ್ನು ಬಂಧಿಸಲಾಗುವುದು” ಎಂದು ಹೆದರಿಸಲಾಗಿದೆ.
ಬಳಿಕ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಲಾಗಿದ್ದು, ತಾವು ಪೊಲೀಸ್ ಅಧಿಕಾರಿ ರಾಹುಲ್ ಕುಮಾರ್ ಹಾಗೂ ಮಹಿಳಾ ಅಧಿಕಾರಿ ಆಕಾಂಕ್ಷ ಸಿಬಿಐ ಎಂದು ತಿಳಿಸಿ, ಸಿಬಿಐ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ತಮ್ಮ ವಾಟ್ಸ್ಆ್ಯಪ್ ನಂಬರಿಗೆ ಕಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದಿಂದ ಮುಕ್ತಗೊಳಿಸಲು ಅಪರಿಚಿತ ಆರೋಪಿಗಳು ಹಣದ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಭಯಗೊಂಡು ಆರ್ಟಿಜಿಎಸ್ ಮೂಲಕ 53 ಲಕ್ಷ ರೂ., 74 ಲಕ್ಷ ರೂ. ಹಾಗೂ 44 ಲಕ್ಷ ರೂ. ಸೇರಿದಂತೆ ಹೀಗೆಯೇ ಒಟ್ಟು 1,71,00,000 ರೂ.ಗಳನ್ನು ವರ್ಗಾಯಿಸಿದ್ದೇನೆ. ಆ ಬಳಿಕ ಇದು ವಂಚನೆ ಎಂಬುದು ಅರಿವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Leave a Comment