ಮಲ್ಪೆ ಬೀಚ್ನಲ್ಲಿ ಅರಳಿದ ಚತುರ್ಭುಜ ಭುವನೇಶ್ವರಿ ದೇವಿ; ಪ್ರವಾಸಿಗರ ಗಮನ ಸೆಳೆದ ಮರಳು ಕಲಾಕೃತಿ
ನ್ಯೂಸ್ ಆ್ಯರೋ: ಈ ಬಾರಿ ಬೆಳಕಿನ ಹಬ್ಬದ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಬಂದಿರುವುದು ಕನ್ನಡಿಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಉಡುಪಿಯ ಸ್ಯಾಂಡ್ ಆರ್ಟ್ ಟೀಮ್ ಎರಡೂ ಆಚರಣೆಗೆ ಮರಳು ಶಿಲ್ಪದ ಮೂಲಕ ಶುಭಹಾರೈಸಿದೆ.
ಉಡುಪಿ ಜಿಲ್ಲೆ ಮಲ್ಪೆ ಕಡಲ ತೀರದಲ್ಲಿ ಮರಳನ್ನು ರಾಶಿ ಹಾಕಿಕೊಂಡು ಸುಂದರವಾದ ಕಲಾ ರಚನೆ ಮಾಡಿರುವ ಕಲಾವಿದರ ಹೆಸರು ಹರೀಶ್ ಸಾಗ. ಇವರಿಗೆ ಸಂತೋಷ ಹಾಲಾಡಿ ಉಜ್ವಲ್ ನಿಟ್ಟೆ ಸಹಾಯ ಮಾಡಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಉಡುಪಿಯಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರು ವಿಶೇಷ ದಿನಗಳನ್ನು, ಹಬ್ಬಗಳನ್ನು ಮರಳುಶಿಲ್ಪದ ಮೂಲಕ ಆಚರಿಸುತ್ತಾರೆ. ಈ ಬಾರಿ ಕೂಡಾ ದೀಪಾವಳಿ, ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಮರಳು ಶಿಲ್ಪದ ಮೂಲಕ ಪ್ರವಾಸಿಗರಿಗೆ ಕೋರಿದ್ದು, ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಈ ಬಾರಿ ಚತುರ್ಭುಜ ಭುವನೇಶ್ವರಿ ತಾಯಿಯನ್ನು ಮರಳಿನಲ್ಲಿ ರಚನೆ ಮಾಡಿದ್ದಾರೆ. ತಾಯಿ ಕೈಯಲ್ಲಿ ಇರುವ ಕರ್ನಾಟಕದ ಬಾವುಟಕ್ಕೆ ಕೆಂಪು, ಹಳದಿ ಬಣ್ಣವನ್ನು ನೀಡಿದ್ದು ವಿಶೇಷವಾಗಿತ್ತು. ಮರಳು ಶಿಲ್ಪದಲ್ಲೇ ದೀಪಾವಳಿಯ ದೀಪ, ಮತ್ತು ರಾಕೆಟ್ ಪಟಾಕಿಯನ್ನು ಮರಳಿನಲ್ಲಿಯೇ ರಚಿಸಿದ್ದಾರೆ. ಹಣತೆಯಿಂದ ಉರಿಯುವ ದೀಪವನ್ನು ಸಹ ರಚನೆ ಮಾಡಿದ್ದು, ಅದಕ್ಕೂ ಸಹ ಬಣ್ಣ ನೀಡಿರುವುದು ಕಲಾವಿದರ ಚಾಕಚಕ್ಯತೆಯನ್ನು ಪ್ರದರ್ಶಿಸುವಂತಿತ್ತು.
ಬೆಳಗ್ಗೆ ಆರಂಭವಾದ ಮರಳುಶಿಲ್ಪ ರಚನಾ ಕಾರ್ಯ ಮಧ್ಯಾಹ್ನ ಮೂರು ಗಂಟೆಯವರೆಗೂ ಸಾಗಿತ್ತು. ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಮರಳು ಕಲೆ ಮಲ್ಪೆ ಕಡಲ ತೀರಕ್ಕೆ ಬಂದ ಪ್ರವಾಸಿಗರನ್ನು ಸೆಳೆದಿದೆ. ಈ ಬಗ್ಗೆ ಉಡುಪಿಯ ಸ್ಯಾಂಡ್ ಆರ್ಟ್ ಟೀಮ್ ಕಲಾವಿದರಾದ ಹರೀಶ್ ಸಾಗ ಮಾತನಾಡಿ, “ಈ ಮರಳು ಶಿಲ್ಪ ಕಲಾಕೃತಿಯನ್ನು ಕನ್ನಡಾಂಬೆಗೆ ಹಾಗೂ ದೀಪಾವಳಿಯ ಶುಭಾಶಯವನ್ನು ನಾಡಿನ ಸಮಸ್ತ ಜನತೆಗೆ ಸಲ್ಲಿಸುತ್ತಿದ್ದೇವೆ. ಈ ಮರಳು ಶಿಲ್ಪ ಕಲಾಕೃತಿ ರಚನೆಗೆ ಐದು ಗಂಟೆ ತೆಗೆದುಕೊಂಡಿದ್ದು, ನನ್ನೊಂದಿಗೆ ಸಂತೋಷ ಹಾಲಾಡಿ ಉಜ್ವಲ್ ನಿಟ್ಟೆಯವರ ಸಹಕಾರವಿದೆ” ಎಂದು ತಿಳಿಸಿದರು.
Leave a Comment