ಕರ್ನಾಟಕದಲ್ಲಿ ಎಚ್​ಎಂಪಿವಿ ವೈರಸ್ ಟೆಸ್ಟ್ ಕಡ್ಡಾಯವಲ್ಲ: ಆರೋಗ್ಯ ಇಲಾಖೆ ಸೂಚನೆ

hmpv-virus
Spread the love

ನ್ಯೂಸ್ ಆ್ಯರೋ: ಕರ್ನಾಟಕದಲ್ಲಿ ಎಚ್​ಎಂಪಿವಿ ವೈರಸ್ ಟೆಸ್ಟ್ ಕಡ್ಡಾಯವಲ್ಲ ಎಂದು ಆರೋಗ್ಯ ಇಲಾಖೆ ಆಸ್ಪತ್ರೆಗೆ ಹೋಗುವವರಿಗೆ ಸೂಚನೆ ನೀಡಿದೆ. ಜತೆಗೆ, ಖಾಸಗಿ ಲ್ಯಾಬ್ ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ಇಲಾಖೆ ನಿಗಾ ಇಡುವುದಾಗಿ ತಿಳಿಸಿದೆ.

ಎಚ್​ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಳ್ಳಿ ಎನ್ನುವವರ ಮೇಲೆ ಹದ್ದಿನ ಕಣ್ಣು ಇಡಲು ನಿರ್ಧರಿಸಿದೆ. ಜ್ವರ, ಕೆಮ್ಮು ಎಂದು ಆಸ್ಪತ್ರೆಗೆ ಹೋಗುವವರು ಎಚ್​ಎಂಪಿವಿ ವೈರಸ್ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದೆ. ಈ ವಿಚಾರವಾಗಿ ಇಂದು (ಬುಧವಾರ) ಸಂಜೆಯೊಳಗೆ ಆರೋಗ್ಯ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಎಚ್​ಎಂಪಿವಿ ವೈರಸ್ ಟೆಸ್ಟ್​ಗೆ 10 ಸಾವಿರ ರೂ.ನಿಂದ 12 ಸಾವಿರ ರೂ. ದರ ಇದೆ. ಹೀಗಾಗಿ ಟೆಸ್ಟಿಂಗ್ ಅಗತ್ಯ ಇಲ್ಲ ಎಂದು ಇಲಾಖೆ ಪ್ರಕಟಣೆ ಹೊರಡಿಸಲಿದೆ ಎಂದು ಮೂಲಗಳು ಹೇಳಿವೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ವೈರಸ್ ಕಾಣಿಸಿಕೊಳ್ಳುವುದು ಸಹಜ. ಅದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲೂ ಎಚ್​​ಎಂಪಿವಿ ಟೆಸ್ಟಿಂಗ್ ಮಾಡುವುದಿಲ್ಲ. ಈ ವೈರಸ್ ಅಪಾಯಕಾರಿ ಅಲ್ಲ ಎಂದು ಆರೋಗ್ಯ ‌ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಪತ್ತೆಯಾಗಿರುವುದು ಚೀನಾದಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ವೈರಸ್ ಅಲ್ಲ ಎಂದು ಈಗಾಗಲೇ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಿದ್ದು, ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!