15 ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ – ಭರದಿಂದ ಸಾಗುತ್ತಿದೆ ಭೂಕುಸಿತ ಪ್ರದೇಶದಲ್ಲಿ ದುರಸ್ತಿ ಕಾಮಗಾರಿ : ಕಾರ್ಯಾಚರಣೆಗೆ ಮಳೆಯೇ ಅಡ್ಡಿ

20240729 104836
Spread the love

ನ್ಯೂಸ್ ಆ್ಯರೋ‌ : ಶಿರಾಡಿ ಘಾಟಿಯ ಎಡಕುಮೆರಿ ಬಳಿ ರೈಲ್ವೇ ಹಳಿ ಮೇಲೆ ಭಾರಿ ಭೂಕುಸಿತ ಉಂಟಾಗಿರುವ ಪರಿಣಾಮ, ಬೆಂಗಳೂರು- ಮಂಗಳೂರು ನಡುವೆ ಮುಂದಿನ 15 ದಿನಗಳ ಕಾಲ ರೈಲು ಸಂಚಾರ ಬಂದ್ ಮಾಡಲಾಗಿದೆ. ಕನಿಷ್ಠ ಆಗಸ್ಟ್ 10 ರ ತನಕ ರೈಲು ಸಂಚಾರ ಫುಲ್ ಬಂದ್ ಆಗಲಿದೆ.

ಶಿರಾಡಿ ಘಾಟಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ಭೂಕುಸಿತವಾಗಿ ರೈಲ್ವೆ ಹಳಿ ಮುಚ್ಚಿಹೋಗಿದೆ. ಆಗಸ್ಟ್ 10ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ಹೇಳಿದೆ. 14 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. 400 ಮಂದಿಯಿಂದ ರೈಲು ಹಳಿ ತೆರವು ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿಗೆ ಭಾರೀ ಮಳೆ ಅಡ್ಡಿ ಉಂಟುಮಾಡುತ್ತಿದೆ.

ಹಳಿಗಳ ದುರಸ್ತಿಗೆ ಅಗತ್ಯ ಸಲಕರಣೆಗಳೊಂದಿಗೆ ಕಾರ್ಮಿಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಗಲು ಪಾಳಿಯಲ್ಲಿ 200, ರಾತ್ರಿ ಪಾಳಿಯಲ್ಲಿ 120 ಹಾಗೂ ಇತರ 110 ಸಿಬಂದಿಯನ್ನು ನಿಯೋಜಿಸಲಾಗಿದೆ. ಸುರಕ್ಷೆಗೆ ಆದ್ಯತೆ ನೀಡಿ ಕಾಮಗಾರಿ ನಿರ್ವಹಿಸಲಾಗುತ್ತಿದೆಯಾದರೂ ಮಳೆಯ ಕಾರಣ ಕೆಲಸ ನಿಧಾನಗತಿಯಲ್ಲಿ ಸಾಗುವಂತಾಗಿದೆ.

ಕಳೆದ ಶುಕ್ರವಾರ ಸಂಜೆ ವೇಳೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ರೈಲು ಹಳಿಗೆ ಅಪಾಯ ಉಂಟಾಗಿತ್ತು. ಆರು ಹಿಟಾಚಿ ಯಂತ್ರಗಳು, ಐದು ಪೋಕ್ಲೈನ್‌ ಯಂತ್ರಗಳೂ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಭೂಕುಸಿತವಾದ ಜಾಗದಲ್ಲಿ ಮಣ್ಣನ್ನು ತಡೆದಿಡುವ ಕೆಲಸ ನಡೆಯುತ್ತಿದ್ದು, ಕಲ್ಲು ಬಂಡೆ, ಮರಳಿನ ಚೀಲ ಜೋಡಿಸಲಾಗುತ್ತಿದೆ. ಅದಕ್ಕೆ ಕಬ್ಬಿಣದ ನೆಟ್‌ (ಗೇಬಿಯನ್‌ ಮೆಷ್‌) ಮೂಲಕ ತಡೆಗೋಡೆ ನಿರ್ಮಿಸಲಾಗುತ್ತಿದೆ.

ಆಹಾರ ತಯಾರಿ, ಪೂರೈಕೆ ಹಾಗೂ ವೈದ್ಯಕೀಯ ತಂಡಗಳೂ ಸ್ಥಳದಲ್ಲಿವೆ. ಸುಬ್ರಹ್ಮಣ್ಯ ನಿಲ್ದಾಣದಿಂದ ಆಹಾರ, ನೀರು ಸರಬರಾಜು ಮಾಡಲಾಗುತ್ತಿದೆ. ದುರಸ್ತಿಗೆ ಬೇಕಾಗಿರುವ 8 ಜನರೇಟರ್‌ಗಳು, ಸಮರ್ಪಕ ಬೆಳಕಿನ ವ್ಯವಸ್ಥೆಯೊಂದಿಗೆ ಸಂಪರ್ಕ ನೆಟ್‌ವರ್ಕ್‌, ಇಂಟರ್‌ನೆಟ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂವಹನ ವ್ಯವಸ್ಥೆಗಳಾದ ಆಟೋ ಫೋನ್‌ಗಳು, ಕಂಟ್ರೋಲ್‌ ಫೋನ್‌, ಸ್ಯಾಟಲೈಟ್‌ ಫೋನ್‌, ವಿಎಸ್‌ಟಿಎ ಸಂವಹನ (ಲೈವ್‌ ಸ್ಟ್ರೀಮಿಂಗ್‌ಗಾಗಿ) ವ್ಯವಸ್ಥೆಗಳನ್ನು ಬಳಸಲಾಗುತ್ತಿದ್ದು, ಹುಬ್ಬಳ್ಳಿಯ ಕೇಂದ್ರ ಕಚೇರಿಯ ವಾರ್‌ ರೂಮ್‌ನಿಂದ ಸಂವಹನ ನಡೆಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ 10 ರವರೆಗೆ ದುರಸ್ತಿ ಕಾರ್ಯ ಮುಗಿಯುವ ಗುರಿ ಹೊಂದಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!