ಪಂಚಭೂತಗಳಲ್ಲಿ ಲೀನವಾದ ಮೆಟ್ರೋ ಧ್ವನಿ ಅಪರ್ಣಾ – ಅಪರ್ಣಾ ಅವರ ಬಾಲ್ಯ, ಕೆರಿಯರ್ ಕುರಿತ ಒಂದಿಷ್ಟು ಮಾಹಿತಿ ಹೀಗಿದೆ..
ನ್ಯೂಸ್ ಆ್ಯರೋ : ಕನ್ನಡ ಭಾಷೆಗೆ ಸ್ವರವಾಗಿದ್ದ ಅಪರ್ಣಾ ಅವರು ನಿನ್ನೆ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರುವುದರೊಂದಿಗೆ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಇಂದು ಬೆಳಗ್ಗೆ 7:30 ಗಂಟೆ ಆಸ್ಪತ್ರೆಯಿಂದ ಅಪರ್ಣಾ ಅವರ ಪಾರ್ಥೀವ ಶರೀರ ತಲುಪಿತ್ತು. ಬನಶಂಕರಿಯ 2ನೇ ಹಂತದಲ್ಲಿರುವಂತ ಮನೆ ಬಳಿ 11:30 ರವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ 1 ಗಂಟೆಗೆ ಬನಶಂಕರಿಯ ವಿದ್ಯುತ್ ಚಿತಾಗಾರಕ್ಕೆ ಅಪರ್ಣಾ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು. ಅಲ್ಲಿ ಸ್ಮಾರ್ತ ಬ್ಯಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ, ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರು, ಮೂಲತಃ ಚಿಕ್ಕಮಗಳೂರಿನ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯವರಾದ 1966 ಅಕ್ಟೋಬರ್ 14 ರಂದು ನಾರಾಯಣಸ್ವಾಮಿ ಮತ್ತು ಪದಾವತಿಯ ದಂಪತಿಯ ಮಗಳಾಗಿ ಜನಿಸಿದರು. ಆದರೆ ಇವರು ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ.
ಕುಮಾರ ಪಾರ್ಕ್ ನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಂಎಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಅಪರ್ಣಾ ಅವರ ತಂದೆ ನಾರಾಯಣಸ್ವಾಮಿ ಪ್ರಸಿದ್ಧ ಪತ್ರಿಕೆಯಲ್ಲಿ ಸಿನಿಮಾ ಪುರವಣಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ನಾರಾಯಣಸ್ವಾಮಿಯವರಿಗೆ ಖ್ಯಾತ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪರಿಚಯವಿತ್ತು. ಈ ಹಿನ್ನೆಲೆಯಲ್ಲಿ ಕಣಗಾಲ್ ರವರು ಅಪರ್ಣಾ ಅವರ ಪ್ರತಿಭೆ ಗುರುತಿಸಿ ಸಿನಿಮಾದಲ್ಲಿ ಅಭಿನಯಕ್ಕೆ ಅವಕಾಶ ನೀಡಿದ್ದರು.
ಮಸಣದ ಹೂ ಬಳಿಕ ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಪರ್ಣಾ ನಟಿಸಿ, ಸ್ಯಾಂಡಲ್ ವುಡ್ ನಟಿಯ ಖ್ಯಾತಿಯನ್ನೂ ಗಳಿಸಿದ್ರು.
1989ರಲ್ಲಿ ನಿರೂಪಕಿಯಾಗಿ ಟಿವಿ ಮಾಧ್ಯಮಕ್ಕೆ ಸೇರಿದರು. 90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ನಿರೂಪಿಸಿದರು. ಆ ನಂತರ ರೇಡಿಯೋ ಜಾಕಿಯಾಗಿ ಕೂಡ ಕೆಲಸ ಮಾಡಿದ್ದಾರೆ. 1998 ರಲ್ಲೇ ದೀಪಾವಳಿ ಕಾರ್ಯಕ್ರಮದಲ್ಲಿ 8 ಗಂಟೆಗಳ ನಿರೂಪಣೆ ಮಾಡಿ ಹೊಸ ದಾಖಲೆ ಬರೆದದ್ದು ಇವರ ಮತ್ತೊಂದು ಕೀರ್ತಿ. ನಾಗರಾಜ್ ವಸ್ತಾರೆ ಅವರನ್ನು ವಿವಾಹವಾಗಿದ್ದ ಅಪರ್ಣಾ ಅವರಿಗೆ ಮಕ್ಕಳು ಇರಲಿಲ್ಲ.
ಅಪರ್ಣಾ ಅವರು ಮೂಡಲ ಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರಲ್ಲದೇ, 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದಾರೆ.
ಮುಂದಿನ ನಿಲ್ದಾಣ ಬೆಂಗಳೂರಿನ ನಮ ಮೆಟ್ರೋಗೂ ದನಿಯಾಗಿದ್ದರು. ಅವರು ನಟಿ, ನಿರೂಪಕಿ ಮಾತ್ರವಲ್ಲ. ಸೃಜನಶೀಲ ಮನಸ್ಸಿನ ಕನ್ನಡದ ಶ್ರೇಷ್ಠ ಕುಡಿ. ಒಂದೇ ಒಂದು ಇಂಗ್ಲಿಷ್ ಪದ ಬಳಸದೆ ಕನ್ನಡದಲ್ಲಿಯೇ ಯಾವುದೇ ಕಾರ್ಯಕ್ರಮವನ್ನೂ ಲೀಲಾಜಾಲವಾಗಿ ನಡೆಸಿಕೊಡುತ್ತಿದ್ದ ರೀತಿ ಎಂಥವರನ್ನು ನಿಬ್ಬೆರೆಗಾಗಿಸುತ್ತಿತ್ತು.
ಅವರ ನಿರೂಪಣಾ ಶೈಲಿ ಎಲ್ಲರಿಗೂ ಇಷ್ಟವಾಗುತ್ತಿತ್ತು. ಚಿತ್ರರಂಗ ಕಾರ್ಯಕ್ರಮವಾಗಲೀ, ರಾಜಕೀಯ ಕಾರ್ಯಕ್ರಮವಾಗಲೀ, ಧಾರ್ಮಿಕ, ಸಾಮಾಜಿಕ, ಯಾವುದೇ ಕಾರ್ಯಕ್ರಮವಾಗಲೀ ಅಪರ್ಣಾ ಅವರ ನಿರೂಪಣೆ ಎಲ್ಲರಿಗೂ ಇಷ್ಟ. ಕೇವಲ 57 ವರ್ಷಕ್ಕೆ ಅವರು ಇಹಲೋಕ ತ್ಯಜಿಸಿದ್ದು, ಕನ್ನಡ ಅಭಿಮಾನಿ ಬಳಗಕ್ಕೆ ತುಂಬಲಾರದ ನೋವಿನ ಸಂಗತಿ. ಅವರ ಅಂತ್ಯಕ್ರಿಯೆ ಇಂದು ನೆರವೇರಿದ್ದು, ಇನ್ನಿಲ್ಲವಾಗಿದ್ದಾರೆ.
Leave a Comment