ಅಲ್ಲು ಅರ್ಜುನ್ಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್; ದೂರು ಹಿಂಪಡೆಯಲು ರೆಡಿ ಎಂದ ಮೃತಳ ಪತಿ
ನ್ಯೂಸ್ ಆ್ಯರೋ: ಕಾಲ್ತುಳಿದಿಂದ ಮಹಿಳೆ ಸಾವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ಅಲ್ಲು ಅರ್ಜುನ್ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈಗಾಗಲೇ ಅಲ್ಲು ಅರ್ಜುನ್ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ನಾಂಪಲ್ಲಿ ನ್ಯಾಯಾಲಯ ವಿಧಿಸಿತ್ತು, ಇದೀಗ ಹೈಕೋರ್ಟ್ ಮಧ್ಯಂತರ ಜಾಮೀನನ್ನು ಹೈಕೋರ್ಟ್ ನೀಡಿದೆ. ಅಲ್ಲು ಅರ್ಜುನ್ 14 ದಿನಗಳ ಜೈಲು ವಾಸದಿಂದ ತಪ್ಪಿಸಿಕೊಂಡಂತಾಗಿದೆ. ಆದರೆ ಒಂದು ದಿನ ಅಥವಾ ಸೋಮವಾರದ ವರೆಗೆಯಾದರೂ ಜೈಲು ವಾಸ ಅನುಭವಿಸುವ ಸಾಧ್ಯತೆ ಇದೆ.
ಎಫ್ಐಆರ್ ರದ್ದು ಕೋರಿ ಅಲ್ಲು ಅರ್ಜುನ್ ಪರ ವಕೀಲರು ತೆಲಂಗಾಣ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಶಾರುಖ್ ಖಾನ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಉಲ್ಲೇಖ ಮಾಡಿ ಅಲ್ಲು ಅರ್ಜುನ್ ಪರ ವಕೀಲರು ವಾದ ಮಂಡಿಸಿದರು. ಆದರೆ ಹೈಕೋರ್ಟ್ನಲ್ಲಿ ಎಫ್ಐಆರ್ ರದ್ದು ಸಾಧ್ಯವಾಗಲಿಲ್ಲ. ವಾದ ಮುಂದುವರೆಸಿ, ಮಧ್ಯಂತರ ಜಾಮೀನಿನ ಅರ್ಜಿಯ ವಾದ ಮಂಡಿಸಿದ ಅಲ್ಲು ಅರ್ಜುನ್ ಪರ ವಕೀಲರು ಅರ್ನಬ್ ಗೋಸ್ವಾಮಿ ಪ್ರಕರಣ ಉಲ್ಲೇಖಿಸಿ ವಾದ ಮಂಡಿಸಿದರು.
ಇತ್ತ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮೃತ ಮಹಿಳೆ ರೇವತಿಯ ಪತಿ ಭಾಸ್ಕರ್, ‘ಕಾಲ್ತುಳಿತಕ್ಕೂ ಅಲ್ಲು ಅರ್ಜುನ್ಗೂ ಸಂಬಂಧವಿಲ್ಲ. ನಾನು ಅಲ್ಲು ಅರ್ಜುನ್ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯಲು ತಯಾರಿದ್ದೇನೆ. ಅಲ್ಲು ಅರ್ಜುನ್ ಬಂಧನ ಆಗುತ್ತಿರುವ ವಿಷಯ ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ.
‘ನಾನು ಆಸ್ಪತ್ರೆಯಲ್ಲಿದ್ದೆ, ಅಲ್ಲು ಅರ್ಜುನ್ ಬಂಧನದ ವಿಷಯ ಮಾಧ್ಯಮಗಳಿಂದ ಗೊತ್ತಾಯ್ತು, ಅಲ್ಲು ಅರ್ಜುನ್ ಇಂದಾಗಿ ನನ್ನ ಪತ್ನಿ ಸಾಯಲಿಲ್ಲ. ನಾನು ಬೇಕಾದರೆ ಈಗ ನೀಡಿರುವ ದೂರನ್ನು ಹಿಂಪಡೆದುಕೊಳ್ಳುತ್ತೇನೆ’ ಎಂದಿದ್ದಾರೆ. ಅಂದಹಾಗೆ ಅಲ್ಲು ಅರ್ಜುನ್, ಮೃತ ಮಹಿಳೆ ರೇವತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿರುವ ಅವರ ಪುತ್ರನ ಚಿಕಿತ್ಸೆಗೆ ಸಂಪೂರ್ಣ ಧನ ಸಹಾಯ ಮಾಡುವ ಭರವಸೆಯನ್ನು ಮೊದಲೇ ನೀಡಿದ್ದರು.
Leave a Comment