ಆಟಿ ಅಮಾವಾಸ್ಯೆಯ ಸಂದೇಶ ಸಾರುವ ಸಾಕ್ಷ್ಯ ಚಿತ್ರ ಬಿಡುಗಡೆ – ತುಳುನಾಡು ವಿಶಿಷ್ಟ ಪರಂಪರೆಗಳ ನಾಡು : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

Spread the love

ನ್ಯೂಸ್ ‌ಆ್ಯರೋ : ನಾಗರಾಧನೆ, ದೈವಾರಾಧನೆ, ದೇವತಾರಾಧನೆಯ ಮುಖೇನ ಪ್ರಕೃತಿಯನ್ನು ಆರಾಧಿಸುವ ಪುಣ್ಯ ನೆಲ ತುಳುನಾಡು. ಈ ನೆಲದಲ್ಲಿ 12 ತಿಂಗಳಿಗೂ ಮಹತ್ವವಿದೆ, ವಿಶೇಷ ಆಚರಣೆ ಇದೆ. ಆಟಿ ತಿಂಗಳು ಅದರಲ್ಲೂ ಆಟಿ ಅಮಾವಾಸ್ಯೆಯ ದಿವಸ ಸಮಸ್ತ ತುಳುನಾಡಿನ ಜನರು ಜಾತಿ ಮತ ಭೇದವಿಲ್ಲದೆ, ಈ ಔಷಧೀಯ ಗುಣವುಳ್ಳ ಹಾಳೆ ಮರದ ಕೆತ್ತೆ ಕಷಾಯವನ್ನು ವರ್ಷ ಪೂರ್ತಿ ತನ್ನ ರೋಗ ನಿರೋಧಕ ಶಕ್ತಿಯ ವೃದ್ಧಿಗಾಗಿ ಸೇವಿಸುತ್ತಾರೆ. ಆದ್ದರಿಂದ ತುಳುನಾಡು ವಿಶೇಷ ಪರಂಪರೆಗಳ ನಾಡು ಈ ಹಾಳೆ ಮರದ ಮಹತ್ವ ಮತ್ತು ಮೌಲ್ಯವನ್ನು ದಯಾನಂದ ಜಿ ಕತ್ತಲ್ ಸಾರ್ ರವರು ತನ್ನ ಆಟಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಮಾತ್ರವಲ್ಲದೆ “ಆಟಿ ಅಮಾಸೆ’ ಎನ್ನುವ ಸಾಕ್ಷ್ಯ ಚಿತ್ರವನ್ನು ತುಳುವ ಬೊಳ್ಳಿ ಪ್ರತಿಷ್ಠಾನದ ಮುಖೇನ ಸಮರ್ಪಿಸಿದ್ದಾರೆ. ಇದನ್ನು ಲೋಕಾರ್ಪಣೆಗೈಯಲು ನನಗೆ ತುಳುವನಾಗಿ ಹೆಮ್ಮೆಯಾಗುತ್ತದೆ ಎಂದು ಸಂಸದ, ನಿವೃತ್ತ ಯೋಧ “ಕ್ಯಾಪ್ಟನ್ ಬ್ರಿಜೇಶ್ ಚೌಟ’ ಮಂಗಳೂರಿನ ಶಕ್ತಿನಗರದ ತುಳುವ ಬೊಳ್ಳಿ ಸಭಾಂಗಣದಲ್ಲಿ ನಡೆದ “ಆಟಿ ಅಮಾಸೆ” ಕಿರು ತುಳು ಸಾಕ್ಷ ಚಿತ್ರವನ್ನು ಬಿಡುಗಡೆಗೊಳಿಸಿ ಮಾತನ್ನಾಡಿದರು.

ಸಾಕ್ಷ್ಯಾ ಚಿತ್ರದ ನಿರ್ದೇಶಕ ಅಭಿಷೇಕ್ ಅರ್ಕುಳ ಛಾಯಾಗ್ರಹಣ ಗೈದ ತೇಜಸ್ ಚೆಮ್ನೂರ್, ಸಂಗೀತ ನಿರ್ದೇಶಕ ನಿಶ್ಚಿತ್ ರಾಜ್ ಹಾಗೂ ನಟಿಸಿದ ಜಯಗುಜರನ್, ಶ್ರೀಮತಿ ಜಯಂತಿ ಪೆರ್ಗಡೆ, ಮಾಸ್ಟರ್ ಚಿರಾಗ್ ಇವರನ್ನು ಸನ್ಮಾನಿಸಲಾಯಿತು‌.

ಕಾರ್ಪೊರೇಟರ್ ಕಿರಣ್ ಕುಮಾರ್ ಮಾತನಾಡಿ ಈ ನೆಲದ ಸಂಸ್ಕೃತಿಯ ಅಧ್ಯಯನಕ್ಕೆ ಒತ್ತು ನೀಡಿ ಈ ಕಿರು ಚಿತ್ರವನ್ನು ಬಿಡುಗಡೆಗೊಳಿಸಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು. ನ್ಯಾಯವಾದಿ ರಾಮಪ್ರಸಾದ್ ಇವರು ಒತ್ತಡಗಳ ಬದುಕಿನ ಮಧ್ಯೆ ಮನುಷ್ಯನಿಗೆ ನೆಮ್ಮದಿಯನ್ನು ಆರೋಗ್ಯವನ್ನು ನೀಡುವ ಪ್ರಕೃತಿ ಆರಾಧನೆ ಪ್ರಕೃತಿ ಸಂರಕ್ಷಣೆ ಇದರ ಬಗೆಗಾಗಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಕತ್ತಲ್ ಸಾರ್ ಇವರು ತನ್ನ ತಂಡದೊಂದಿಗೆ ತುಳುವ ಬೊಳ್ಳಿ ಪ್ರತಿಷ್ಠಾನದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಈ ಸತ್ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪಂಬದರ ಸಮಾಜ ಸಂಘದ ಅಧ್ಯಕ್ಷ ಪುರುಷೋತ್ತಮ ಗೋಳಿಪಲ್ಕೆ ಇವರು ಈ ಸಾಕ್ಷ ಚಿತ್ರ ಹಾಗೂ ಆಟಿ ಎನ್ನುವ ಪುಸ್ತಕ ಸಂಶೋಧಕರಿಗೆ ಸಂಶೋಧನೆಗೆ ಆಕರ ವಿಶ್ವದಾದ್ಯಂತ ತುಳು ಭಾಷೆ ಸಂಸ್ಕೃತಿಯ ಬಗೆಗಾಗಿ ತನ್ನ ಮಾತು ಮತ್ತು ಬರಹಗಳ ಮುಖೇನ ನಿರಂತರ ಸೇವೆ ಸಲ್ಲಿಸುವ ದಯಾನಂದ ಕತ್ತಲ್ ಸಾರ್ ಇವರು ನಮ್ಮ ಸಮುದಾಯದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.

ರಾಜ್ಯ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಭವಾನಿಯಮ್ಮ, ಚಲನಚಿತ್ರ ನಿರ್ಮಾಪಕ ಹೇಮಂತ್ ಸುವರ್ಣ, ಕಟ್ಟದಲ್ತಾಯ ದೈವ ಪಾತ್ರಿ ಶ್ರೀ ಅಶೋಕ್ ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಹಕರಿಸಿದ ಅಂಚೆ ಇಲಾಖೆಯ ಪೋಸ್ಟಲ್ ಅಸಿಸ್ಟೆಂಟ್ ಚೇತನ್ ಕುಮಾರ್ ಇವರನ್ನು ಗೌರವಿಸಲಾಯಿತು.

ಸಾಕ್ಷ ಚಿತ್ರದ ನಿರ್ಮಾಪಕ ನಿರೂಪಕ ದಯಾನಂದ ಜಿ ಕತ್ತಲ್ ಸಾರ್ ಸ್ವಾಗತಿಸಿ ಅಭಿನಂದಿಸಿ, ಈ ಸಾಕ್ಷ ಚಿತ್ರವು ತುಳುವ ಬೊಳ್ಳಿ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದೆ ಎಲ್ಲರೂ ನೋಡಿ ಸಬ್ಸ್ಕ್ರೈಬ್ ಮಾಡಿ ಆಶೀರ್ವದಿಸಿ ಎಂದರು. ಕಾರ್ತಿಕ್, ಕೌಶಿಕ್, ಖುಷಿ ಇವರು ಪ್ರತಿಷ್ಠಾನದ ಧ್ಯೇಯಗೀತೆಯನ್ನು ಹಾಡಿದರು. ಪುರುಷೋತ್ತಮ ವಂದನಾರ್ಪಣೆಗೈದರು.

Leave a Comment

Leave a Reply

Your email address will not be published. Required fields are marked *

error: Content is protected !!