ದಿಢೀರ್ ಹೈಕೋರ್ಟ್ ಮೆಟ್ಟಿಲೇರಿದ ಅಲ್ಲು ಅರ್ಜುನ್; ಪುಷ್ಪರಾಜನಿಗೆ ಕಾಡ್ತಿದ್ಯಾ ಬಂಧನದ ಭೀತಿ
ನ್ಯೂಸ್ ಆ್ಯರೋ: ಪುಷ್ಪ-2 ಚಿತ್ರದ ಯಶಸ್ಸಿನಲ್ಲಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಧ್ಯಾ ಥಿಯೇಟರ್ ಘಟನೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅಲ್ಲು ಅರ್ಜುನ್ ಅರ್ಜಿ ಸಲ್ಲಿಸಿದ್ದಾರೆ.
ಚಿಕ್ಕಡಪಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಅಲ್ಲು ಅರ್ಜುನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪ -2 ಚಿತ್ರದ ಪ್ರೀಮಿಯರ್ ಶೋ ಡಿಸೆಂಬರ್ 4 ರಂದು ನಡೆದಿತ್ತು. ಈ ವೇಳೆ ಹೈದರಾಬಾದ್ ಸಂಧ್ಯಾ ಥಿಯೇಟರ್ನಲ್ಲಿ ಅಭಿಮಾನಿಗಳ ಜೊತೆ ಪುಷ್ಪ-2 ವೀಕ್ಷಿಸಲು ಅಲ್ಲು ಅರ್ಜುನ್ ಬಂದಿದ್ದರು.
ನೆಚ್ಚಿನ ನಟನ ನೋಡಲು ಅಭಿಮಾನಿಗಳ ಸಾಗರ ಹರಿದುಬಂದಿತ್ತು. ಆಗ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಅನ್ನೋ ಮಹಿಳೆ ಜೀವ ಕಳೆದುಕೊಂಡಿದ್ದರು. ಕಾಲ್ತುಳಿತ ಸಂಬಂಧ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಕೂಡ ಪೊಲೀಸರು ಆರೋಪಿಯನ್ನಾಗಿ ಮಾಡಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅಲ್ಲು ಅರ್ಜಿಯಲ್ಲಿ ಕೋರಿದ್ದಾರೆ.
ಸದ್ಯ, ಸಂತ್ರಸ್ತ ಕುಟುಂಬಕ್ಕೆ ಇವರು 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರು ಕೂಡ ಈ ಘಟನೆಗೆ ಕಾರಣ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಈ ರೀತಿಯ ವಿಶೇಷ ಶೋಗಳನ್ನು ಆಯೋಜನೆ ಮಾಡುವುದನ್ನು ಅಲ್ಲಿನ ಸರ್ಕಾರ ರದ್ದು ಮಾಡಿದೆ.
‘ಪುಷ್ಪ 2’ ಸಿನಿಮಾ ರಿಲೀಸ್ ಆಗಿ ವಾರ ಕಳೆದಿದೆ. ಈ ಚಿತ್ರ ಒಂದು ವಾರದೊಳಗೆ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿದೆ.
Leave a Comment