ಕ್ಷಮೆಗೆ ಕರಗದ ಯೆಮನ್ ಅಧ್ಯಕ್ಷ: ನರ್ಸ್ ನಿಮಿಷ ಪ್ರಿಯಾ ಗಲ್ಲುಶಿಕ್ಷೆಗೆ ಅಧಿಕೃತ ಮುದ್ರೆ

Nimisha
Spread the love

ನ್ಯೂಸ್ ಆ್ಯರೋ: ಯೆಮನ್ ಪ್ರಜೆಯೊಬ್ಬನ ಹತ್ಯೆ ಮಾಡಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿ ಯೆಮನ್‌ನ ಜೈಲಿನಲ್ಲಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಈಗ ಯೆಮನ್ ಅಧ್ಯಕ್ಷರು ಕೂಡ ಅಧಿಕೃತ ಮುದ್ರೆಯೊತ್ತಿದ್ದಾರೆ. ಹೀಗಾಗಿ ಒಂದು ತಿಂಗಳ ಒಳಗೆ ಅವರಿಗೆ ಶಿಕ್ಷೆಯಾಗುವ ಸಾಧ್ಯತೆ ಇದೆ. 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಕ್ಷಮಾರ್ಪಣ ಮನವಿಯನ್ನು ಈಗ ಯೆಮನ್ ಅಧ್ಯಕ್ಷ ರಷದ್ ಅಲ್ ಅಲಿಮಿ ಕೂಡ ತಿರಸ್ಕರಿಸಿದ್ದಾರೆ. ಹೀಗಾಗಿ ಅವರಿಗೆ ಶಿಕ್ಷೆಯಾಗುವುದು ಖಚಿತವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಪ್ರತಿಕ್ರಿಯಿಸಿದ್ದು, ಕೇರಳದ ನಿಮಿಷ ಪ್ರಿಯಾಗೆ ಯೆಮನ್‌ನಲ್ಲಿ ಶಿಕ್ಷೆ ವಿಧಿಸುತ್ತಿರುವ ವಿಚಾರ ತಿಳಿದಿದೆ ಎಂದು ಹೇಳಿದೆ.

ಈ ವಿಚಾರದಲ್ಲಿ ಪ್ರಿಯಾ ಅವರ ಕುಟುಂಬವು ಸಂಬಂಧಿತ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿದೆ ಎಂಬುದನ್ನು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಈ ವಿಷಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

36ರ ಹರೆಯದ ನಿಮಿಷಾ ಪ್ರಿಯಾ ಅವರನ್ನು ಮರಣದಂಡನೆಯಿಂದ ರಕ್ಷಿಸಲು ಎಲ್ಲಾ ಪ್ರಯತ್ನ ಮಾಡಿ ವಾಪಸ್ ಮನೆಗೆ ಮರಳಿದ ಕುಟುಂಬಕ್ಕೆ ಯೆಮನ್ ಅಧ್ಯಕ್ಷರ ಈ ನಿರ್ಧಾರವು ಆಘಾತವನ್ನುಂಟು ಮಾಡಿದೆ. ನಿಮಿಷಾ ತಾಯಿ ಪ್ರೇಮಾ ಕುಮಾರಿ( 57) ಈ ವರ್ಷದ ಆರಂಭದಲ್ಲಿ ಮಗಳನ್ನು ಉಳಿಸಿಕೊಳ್ಳುವ ಮಾರ್ಗಗಳಿಗಾಗಿ ಯೆಮೆನ್‌ನ ರಾಜಧಾನಿ ಸನಾವನ್ನು ತಲುಪಿದರು ಮತ್ತು ಮರಣದಂಡನೆಯನ್ನು ಮನ್ನಾ ಮಾಡಿ ಅದರ ಬದಲು ಹತ್ಯೆಯಾದ ವ್ಯಕ್ತಿಯ ಕುಟುಂಬದೊಂದಿಗೆ ರಕ್ತಧನವನ್ನು ನೀಡುವುದಕ್ಕೆ ಮಾತುಕತೆ ನಡೆಸಲು ಅಲ್ಲಿಯೇ ತಂಗಿದ್ದಾರೆಂದು ವರದಿಯಾಗಿದೆ. (ರಕ್ತಧನ ಎಂದರೆ ಮರಣದಂಡನೆಗೆ ಬದಲಾಗಿ ಮರಣದಂಡನೆಗೊಳಗಾದ ವ್ಯಕ್ತಿ ಸಂತ್ರಸ್ತನ ಕುಟುಂಬಕ್ಕೆ ನೀಡುವ ಹಣವಾಗಿದೆ.)

2017 ರಲ್ಲಿ ಯೆಮನ್ ಪ್ರಜೆಯಾದ ತಲಾಲ್ ಅಬ್ದೋ ಮಹದಿಯನ್ನು ಕೊಂದಿದ್ದಕ್ಕಾಗಿ ನಿಮಿಷಾ ಪ್ರಿಯಾ ತಪ್ಪಿತಸ್ಥಳೆಂದು ಸಾಬೀತಾಗಿದೆ. ಒಂದು ವರ್ಷದ ನಂತರ, ಯೆಮನ್‌ನ ವಿಚಾರಣಾ ನ್ಯಾಯಾಲಯವು ಆಕೆಗೆ ಮರಣದಂಡನೆ ವಿಧಿಸಿತು. ಅಂದಿನಿಂದ ಆಕೆಯ ಬಿಡುಗಡೆಗಾಗಿ ಕುಟುಂಬಸ್ಥರು ಹೋರಾಟ ನಡೆಸುತ್ತಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಅವರು ಯೆಮನಿ ಸುಪ್ರೀಂಕೋರ್ಟನ್ನು ಸಂಪರ್ಕಿಸಿದರು. ಆದರೆ ಅವರ ಮನವಿಯನ್ನು 2023 ರಲ್ಲಿ ತಿರಸ್ಕರಿಸಲಾಯಿತು. ಈಗ, ದೇಶದ ಅಧ್ಯಕ್ಷರು ಸಹ ನಿಮಿಷಾ ಪ್ರಿಯಾ ಅವರ ಮನವಿಯನ್ನು ತಿರಸ್ಕರಿದ್ದಾರೆ. ಹೀಗಾಗಿ ನಿಮಿಷ ಅವರು ಈಗ ಸಂತ್ರಸ್ತನ ಕುಟುಂಬ ಹಾಗೂ ಅವರ ಬುಡಕಟ್ಟು ಮುಖಂಡರು ಕ್ಷಮಿಸಿದರಷ್ಟೇ ಈ ಶಿಕ್ಷೆಯಿಂದ ಪಾರಾಗುವಂತ ಏಕೈಕ ಆಯ್ಕೆ ಅವರ ಬಳಿ ಉಳಿದಿದೆ.

ಪಾಲಕ್ಕಾಡ್ ಮೂಲದ ನಿಮಿಷಾ ಪ್ರಿಯಾ ಅವರು ತರಬೇತಿ ಪಡೆದ ನರ್ಸ್ ಆಗಿದ್ದು, ಯೆಮೆನ್‌ನ ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅವರ ಪತಿ ಮತ್ತು ಅಪ್ರಾಪ್ತ ಮಗಳು ಹಣಕಾಸಿನ ಕಾರಣಗಳಿಂದಾಗಿ 2014 ರಲ್ಲಿ ಭಾರತಕ್ಕೆ ಮರಳಿದರು. ಅದೇ ವರ್ಷ, ಯೆಮನ್‌ನಲ್ಲಿ ಅಂತರಿಕ ಯುದ್ಧ ಶುರುವವಾಗಿದ್ದರಿಂದ ದೇಶವು ಹೊಸ ವೀಸಾಗಳನ್ನು ನೀಡುವುದನ್ನು ನಿಲ್ಲಿಸಿದ್ದರಿಂದ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ. ನಂತರ 2015 ರಲ್ಲಿ, ಪ್ರಿಯಾ ಯೆಮನ್‌ನ ಸನಾದಲ್ಲಿ ತನ್ನ ಕ್ಲಿನಿಕ್ ಅನ್ನು ಸ್ಥಾಪಿಸಲು ಮಹದಿಯ ಬೆಂಬಲವನ್ನು ಕೋರಿದಳು, ಯೆಮನ್ ಕಾನೂನಿನ ಪ್ರಕಾರ, ಕ್ಲಿನಿಕ್ ಮತ್ತು ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಲು ಅಲ್ಲಿನ ಪ್ರಜೆಗಳಿಗೆ ಮಾತ್ರ ಅವಕಾಶವಿದೆ. ಈ ವ್ಯವಹಾರದ ವಿವಾದವೇ ಕೊನೆಗೆ ಮಹದಿ ಕೊಲೆಯಲ್ಲಿ ಅಂತ್ಯವಾಗಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!