ನಟ ಅಲ್ಲು ಅರ್ಜುನ್ ಅನ್ನು ಬಂಧಿಸಿದ ಪೊಲೀಸರು
ನ್ಯೂಸ್ ಆ್ಯರೋ: ನ್ಯೂಸ್ ಆ್ಯರೋ: ಸಂಧ್ಯಾ ಥಿಯೇಟರ್ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಜೀವ ಕಳೆದುಕೊಂಡಿದ್ದರು. ಈ ಘಟನೆ ಸಂಬಂಧ ಸದ್ಯ ಚಿಕ್ಕಡಪಲ್ಲಿ ಠಾಣೆಯ ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಸಂಧ್ಯಾ ಥಿಯೇಟರ್ ಬಳಿ ಸಂಭವಿಸಿದ್ದ ಕಾಲು ತುಳಿತದಲ್ಲಿ ರೇವತಿ ಎನ್ನುವ ಮಹಿಳೆ ಪ್ರಾಣ ಬಿಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಂತರ ಪ್ರತಿಕ್ರಿಯಿಸಿದ್ದ ಅಲ್ಲು ಅರ್ಜುನ್ ಅವರು, ಮಹಿಳೆ ಜೀವ ಬಿಟ್ಟಿರುವುದು ಕೇಳಿ ತುಂಬಾ ನೋವಾಗಿದೆ. ಜನರು ನೋಡಲೆಂದು ನಾವು ಸಿನಿಮಾ ಮಾಡುತ್ತೇವೆ. ಆದರೆ ಈ ಘಟನೆಯಿಂದ ನಮಗೆ ನೋವಾಗಿದ್ದು ರೇವತಿ ಅವರಿಗೆ ಸಂತಾಪ ಸೂಚಿಸುತ್ತೇನೆ. ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳನ್ನು ಕೊಡುತ್ತೇನೆ. ಹಾಗೇ ನಮ್ಮ ತಂಡದಿಂದ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧರಿದ್ದೇವೆ. ನನ್ನಿಂದ ಆಗುವ ಎಲ್ಲ ಸಹಾಯ ಮಾಡುತ್ತೇನೆ. ಶೀಘ್ರದಲ್ಲೇ ರೇವತಿ ಕುಟುಂಬವನ್ನು ಭೇಟಿಯಾಗುತ್ತೇನೆ ಎಂದು ಭರವಸೆಗಳನ್ನು ನೀಡಿದ ವಿಡಿಯೋವನ್ನು ಟ್ವೀಟರ್ನಲ್ಲಿ ಪೋಸ್ಟ್ ಮಾಡಿದ್ದರು.
ಡಿಸೆಂಬರ್ 4 ರಂದು ಯಾವುದೇ ಪೊಲೀಸರ ಅನುಮತಿ ಪಡೆಯದೇ ಅಲ್ಲು ಅರ್ಜುನ್ ಪ್ರೀಮಿಯರ್ ಶೋಗೆ ಬಂದಿದ್ದರು. ಹೀಗಾಗಿ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ಈ ವೇಳೆ ಕಾಲು ತುಳಿತ ಉಂಟಾಗಿ ಮಹಿಳೆ ಜೀವ ಬಿಟ್ಟಿದ್ದರು. ಓರ್ವ ಬಾಲಕನು ಗಂಭೀರವಾಗಿದ್ದನು. ಸದ್ಯ ಇದೇ ಘಟನೆಗೆ ಸಂಬಂಧ ಪಟ್ಟಂತೆ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಬಂದ ಪೊಲೀಸರು ನಟನನ್ನು ಕಾರಿನಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ಅವರ ತಂದೆ, ಸಹೋದರ, ಪತ್ನಿ ಸೇರಿ ಇನ್ನಿತರರು ಇದ್ದರು.
ರೇವತಿ ಜೀವ ಬಿಟ್ಟ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣ ರದ್ದು ಕೋರಿ ಅಲ್ಲು ಅರ್ಜುನ್ ಪರ ವಕೀಲರು ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಪ್ರಕರಣವನ್ನು ಕೋರ್ಟ್ ರದ್ದು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಪೋಲಿಸರು ನಟನನ್ನು ಬಂಧಿಸಿದ್ದಾರೆ.
Leave a Comment