ನಟಿ ಸಮಂತಾ ರುತ್ ಪ್ರಭುಗೆ ಆಘಾತ; ತಂದೆ ಜೋಸೆಫ್ ರುತ್ ಪ್ರಭು ನಿಧನ
ನ್ಯೂಸ್ ಆ್ಯರೋ: ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರ ಕುಟುಂಬದಲ್ಲಿ ಶೋಕ ಆವರಿಸಿದೆ. ಸಮಂತಾ ತಂದೆ ಜೋಸೆಫ್ ಪ್ರಭು ಇಂದು (ನವೆಂಬರ್ 29) ನಿಧನರಾಗಿದ್ದಾರೆ. ಈ ನೋವಿನ ವಿಷಯವನ್ನು ಸ್ವತಃ ಸಮಂತಾ ರುತ್ ಪ್ರಭು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಈ ಕಷ್ಟದ ಕಾಲದಲ್ಲಿ ಸಮಂತಾ ಅವರಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ‘ನಾವು ಮತ್ತೆ ಭೇಟಿಯಾಗುವವರೆಗೆ ಅಪ್ಪ’’ ಎಂದು ಸಮಂತಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಒಡೆದ ಹೃದಯದ ಎಮೋಜಿ ಬಳಸಿದ್ದಾರೆ.
ಸಮಂತಾ ತಂದೆ ಜೋಸೆಫ್ ಪ್ರಭು ಅವರು ತೆಲುಗು ಆಂಗ್ಲೋ ಇಂಡಿಯನ್ ಆಗಿದ್ದರು. ಸಮಂತಾ ಯಶಸ್ಸಿನಲ್ಲಿ ತಂದೆಯ ಕೊಡುಗೆ ಪ್ರಮುಖವಾಗಿತ್ತು. ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನ ಏಳು-ಬೀಳಿನಲ್ಲಿ ಸಮಂತಾಗೆ ಅವರ ತಂದೆ ಬೆಂಬಲವಾಗಿ ನಿಂತಿದ್ದರು. ತಂದೆಯನ್ನು ಕಳೆದುಕೊಂಡ ಸಮಂತಾ ಅವರಿಗೆ ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಸಾಂತ್ವನದ ಸಂದೇಶ ಕಳಿಸುತ್ತಿದ್ದಾರೆ.
ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಸಮಂತಾ ಅವರು ತಮ್ಮ ಕುಟುಂಬದವರ ಬೆಂಬಲವನ್ನು ನೆನೆಯುತ್ತಿದ್ದರು. ಅನೇಕ ಸಂದರ್ಶನಗಳಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಪಡೆದಿದ್ದಾಗ ಜೋಸೆಫ್ ಪ್ರಭು ಅವರು ತುಂಬ ಬೇಸರ ಮಾಡಿಕೊಂಡಿದ್ದರು. ಆ ನೋವಿನಿಂದ ಹೊರಗೆ ಬರಲು ಅವರಿಗೆ ಬಹಳ ಸಮಯ ಹಿಡಿದಿತ್ತು.
ಆದರೆ ಈಗ ಸಮಂತಾ ಅವರ ತಂದೆಯ ಹಠಾತ್ ಸಾವು ಸಮಂತಾ ಅವರ ಅಭಿಮಾನಿಗಳು, ಕುಟುಂಬ ಹಾಗೂ ಪ್ರೀತಿಪಾತ್ರರಲ್ಲಿ ಬೇಸರವನ್ನು ಉಂಟು ಮಾಡಿದ್ದು, ಜೋಸೆಫ್ ರುತ್ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.
Leave a Comment