4ನೇ ಹಂತದ ಕ್ಯಾನ್ಸರ್ ಗೆದ್ದ ನವಜೋತ್ ಸಿಂಗ್ ಸಿಧು ಪತ್ನಿ; ಆದರೆ 850 ಕೋಟಿ ರೂ. ಲೀಗಲ್ ನೋಟಿಸ್‌ ಕೊಟ್ಟ ವೈದ್ಯರು

Congress leader Navjot Singh Sidhu's wife
Spread the love

ಕ್ಯಾನ್ಸರ್ ಎಂಬ ಮಹಾಮಾರಿ ಇಂದು ಹಲವಾರು ಮಂದಿಯ ಜೀವ ಪಡೆಯುತ್ತಿದೆ. ಇದಕ್ಕೆ ಹಲವಾರು ರೀತಿಯ ಔಷಧಗಳನ್ನು ಕಂಡು ಹಿಡಿದರೂ ಕ್ಯಾನ್ಸರ್‍‌ ರೋಗಿಗಳ ಜೀವವನ್ನು ಹಿಂಡಿ ಹಿಪ್ಪೆ ಮಾಡುವಂಥ ಚಿಕಿತ್ಸೆ ಇದ್ದರೂ, ಎಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ನಡುವೆಯೂ ಹೋಮಿಯೋಪಥಿ, ಆಯುರ್ವೇದದ ಔಷಧಗಳನ್ನು ಮಾಡಿ ಕ್ಯಾನ್ಸರ್‍‌ನಿಂದ ಹೊರಬಂದಿರುವ ಹಲವರು ರೋಗಿಗಳೂ ತಮ್ಮ ಅನುಭವವಗಳನ್ನು ಹಂಚಿಕೊಂಡದ್ದು ಇದೆ.

ಆದರೆ ಇದೀಗ ಆಹಾರ ಕ್ರಮದಿಂದ ತಮ್ಮ ಪತ್ನಿ ನಾಲ್ಕನೇ ಹಂತದ ಕ್ಯಾನ್ಸರ್‍‌ನಿಂದ ಹೊರಬಂದಿರುವುದಾಗಿ ಹೇಳಿಕೆ ಕೊಟ್ಟಿರುವ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಸಂಕಷ್ಟ ಎದುರಾಗಿದೆ. ಅವರಿಗೆ ಲೀಗಲ್‌ ನೋಟಿಸ್‌ ಜಾರಿಯಾಗಿದ್ದು, 850 ಕೋಟಿ ರೂ. ಪರಿಹಾರಕ್ಕೆ ಸೂಚಿಸಲಾಗಿದೆ.

ಹೌದು. . . .ಅಷ್ಟಕ್ಕೂ ಆಗಿರುವುದು ಏನೆಂದರೆ, ಸಿಧು ಅವರ ಪತ್ನಿ ನಾಲ್ಕನೇ ಹಂತದ ಕ್ಯಾನ್ಸರ್‍‌ನಿಂದ ಬಳಲುತ್ತಿದ್ದರು. ಅವರು ಅದರಿಂದ ಗುಣಮುಖರಾಗಿರುವುದಾಗಿ ಸಿಧು ಹೇಳಿದ್ದರು. ತಮ್ಮ ಪತ್ನಿ ನವಜೋತ್ ಕೌರ್ ಕ್ಯಾನ್ಸರ್‍‌ನಿಂದ ಗೆದ್ದು ಬರಲು ವಿಶೇಷ ಆಹಾರ ಶೈಲಿಯೇ ಕಾರಣ ಎಂದು ಪೋಸ್ಟ್ ಮೂಲಕ ತಿಳಿಸಿದ್ದರು. ಆದರೆ, ಅವರು ಪೋಸ್ಟ್‌ ಮಾಡುತ್ತಿದ್ದಂತೆಯೇ ವೈದ್ಯಕೀಯ ರಂಗದಲ್ಲಿ ಕೋಲಾಹಲವೇ ಎದ್ದುಬಿಟ್ಟಿದೆ! ಇದೇ ಕಾರಣಕ್ಕೆ, ಛತ್ತೀಸ್‌ಗಢ ಸಿವಿಲ್ ಸೊಸೈಟಿ ಲೀಗಲ್ ನೋಟಿಸ್ ನೀಡಿದೆ.

ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಏಳು ದಿನಗಳಲ್ಲಿ ಸಲ್ಲಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಒಂದು ವೇಳೆ ಈ ದಾಖಲೆ ಸಲ್ಲಿಸಲು ವಿಫಲವಾದರೆ 850 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಸಿಧು ಅವರು, ತಮ್ಮ ಪತ್ನಿ ಸಂಪೂರ್ಣ ಚೇತರಿಸಿಕೊಂಡಿರುವ ಕುರಿತು ತಿಳಿಸಿದ್ದರು. ಅದರಲ್ಲಿ ಅವರು, ಕೇವಲ 40 ದಿನಗಳಲ್ಲಿ ಪತ್ನಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ, ಅದೂ ಕೂಡ ವಿಶೇಷ ಆಹಾರ ಕ್ರಮದಿಂದ ಎಂದಿದ್ದರು. ಪತ್ನಿ ಬದುಕುಳಿಯುವ ಸಾಧ್ಯತೆ ಶೇಕಡಾ 5ರಷ್ಟು ಮಾತ್ರ ಎಂದು ವೈದ್ಯರು ಹೇಳಿದ್ದರು.

ಆದರೆ ಅರಿಶಿಣ, ಬೇವಿನ ನೀರು, ಆ್ಯಪಲ್ ಸೈಡರ್ ವಿನೆಗರ್ ಮತ್ತು ನಿಂಬೆ ನೀರು, ಇವುಗಳಿಂದ ಕ್ಯಾನ್ಸರ್‌ನಿಂದ ಗುಣಮುಖರಾಗಿ ಕೇವಲ 40 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಸಿಧು ಹೇಳಿದ್ದರು. ಕ್ಯಾನ್ಸರ್‌ ಚಿಕಿತ್ಸೆಗೆ ಕೋಟಿ ಕೋಟಿ ಖರ್ಚು ಮಾಡುವುದೆಲ್ಲಿ? ನಮ್ಮದೇ ಸುತ್ತಮುತ್ತ ಸಿಗುವ ವಸ್ತುಗಳಿಂದ ಸಿಗುವ ಚಿಕಿತ್ಸೆ ಎಲ್ಲಿ? ಅಂತ ಪ್ರಶ್ನೆ ಮಾಡಿದ್ದರು.

ಆದರೆ ಇಂಥ ಹೇಳಿಕೆ ಜನರನ್ನು ತಪ್ಪು ದಾರಿಗೆ ಎಳೆಯುತ್ತದೆ ಎನ್ನುವುದು ವೈದ್ಯರ ಅಭಿಮತ. ಈ ರೀತಿ ಹೇಳಿಕೆ ನೀಡಿದರೆ, ಕ್ಯಾನ್ಸರ್ ಪೀಡಿತರು ಅಲೋಪಥಿಯನ್ನು ನಂಬದ ಸ್ಥಿತಿ ಬರುತ್ತದೆ. ಇದು ಸರಿಯಲ್ಲ. ಆದ್ದರಿಂದ ಸಿಧು ದಂಪತಿ ಜನರ ಎದುರು ಕ್ಷಮೆ ಯಾಚಿಸಬೇಕು. ನವಜೋತ್ ಕೌರ್ ಅವರಿಗೆ ನೀಡಲಾದ ಅಲೋಪಥಿ ಚಿಕಿತ್ಸೆಯ ದಾಖಲೆ ನಮ್ಮ ಬಳಿ ಇದೆ. ಆದರೆ, ಗೌಪ್ಯತೆಯ ಕಾರಣದಿಂದ ಅದನ್ನು ನಾವು ಬಿಡುಗಡೆ ಮಾಡುವುದಿಲ್ಲ . ಬದಲಾಗಿ ನವಜೋತ್ ಸಿಂಗ್ ಅವರು ಆ ಎಲ್ಲಾ ದಾಖಲೆಗಳನ್ನು ಒಂದು ವಾರದ ಒಳಗಾಗಿ ಸಲ್ಲಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ನವಜೋತ್ ಅವರಿಗೂ ಕೆಲವೊಂದು ಪ್ರಶ್ನೆಯನ್ನು ನೋಟಿಸ್‌ನಲ್ಲಿ ಕೇಳಲಾಗಿದೆ. ಚಿಕಿತ್ಸೆಯ ಭಾಗವಾಗಿ ನೀವು ಅಲೋಪಥಿ ಔಷಧಿ ಸೇವನೆ ಮಾಡಿರಲಿಲ್ಲವೆ? ನಿಮ್ಮ ಪತಿ ಸಂಪೂರ್ಣ ಸತ್ಯ ಹೇಳಿದ್ದಾರಾ? ನಿಮ್ಮ ಪತಿಯ ಹೇಳಿಕೆಯನ್ನು ನೀವು ಸಮರ್ಥಿಸುವುದಿಲ್ಲ ಎಂದಾದರೆ ಮಾಧ್ಯಮದ ಮುಂದೆ ನೀವು ಸತ್ಯವನ್ನು ಹೇಳಬೇಕು ಎಂದು ತಿಳಿಸಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!