ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ; ಮಂತ್ರ-ಘೋಷಗಳೊಂದಿಗೆ ಸಿಕ್ಕಿತು ಭವ್ಯ ಸ್ವಾಗತ

Pm 3
Spread the love

ನ್ಯೂಸ್ ಆ್ಯರೋ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಆಗಮಿಸಿದ್ದು, ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

‘ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್‌ಗೆ ಬಂದಿದ್ದೇನೆ. ಸಭೆಯಲ್ಲಿ ವಿಶ್ವದ ಹಲವು ನಾಯಕರೊಂದಿಗೆ ಚರ್ಚೆಗಳು ಮತ್ತು ಅರ್ಥಪೂರ್ಣ ಮಾತುಕತೆ ನಡೆಯುವುದನ್ನು ನಾನು ಎದುರು ನೋಡುತ್ತಿದ್ದೇನೆ. ಬ್ರೆಜಿಲ್​ಗೆ ಬಂದಿಳಿಯುತ್ತಿದ್ದಂತೆ ಅಲ್ಲಿನ ಭಾರತೀಯರು ಮಂತ್ರಘೋಷಗಳೊಂದಿಗೆ ನನ್ನನ್ನು ಸ್ವಾಗತಿಸಿದರು, ನನ್ನ ಮೇಲೆ ಅವರಿಟ್ಟಿರುವ ಪ್ರೀತಿಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ‘ಎಕ್ಸ್‌’ನಲ್ಲಿ ಮೋದಿ ಪೋಸ್ಟ್ ಮಾಡಿದ್ದಾರೆ.

ಮೋದಿ ಅವರು ಇಂದು ಮತ್ತು ನಾಳೆ ಬ್ರೆಜಿಲ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಶೃಂಗಸಭೆಯಲ್ಲಿ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಹಲವು ದೇಶಗಳ ಪ್ರಮುಖರು ಭಾಗಿಯಾಗಲಿದ್ದಾರೆ.

ತ್ರಿರಾಷ್ಟ್ರ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನೈಜೀರಿಯಾದ ಅಬುಜಾಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಅವರು ನೈಜೀರಿಯಾ ಅಧ್ಯಕ್ಷ ಬೋಲಾ ಅಹಮ್ಮದ್‌ ಟಿನುಬು ಅವರೊಂದಿಗೆ ರಕ್ಷಣೆ, ವ್ಯಾಪಾರ ಮತ್ತು ಇಂಧನ ವಲಯಗಳಲ್ಲಿನ ದ್ವಿಪಕ್ಷೀಯ ಸಹಕಾರ ಕುರಿತು ಚರ್ಚಿಸಿದ್ದರು. ಇದರೊಂದಿಗೆ 17 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗಿದೆ.

ಜಿ20 ಶೃಂಗದಲ್ಲಿ ಭಾಗಿಯಾದ ನಂತರ ಮೋದಿ ಅವರು ಬುಧವಾರ ಗಯಾನಾ ದೇಶಕ್ಕೆ ತೆರಳಲಿದ್ದಾರೆ. ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಆಹ್ವಾನದ ಮೇರೆಗೆ ಮೋದಿ ಗಯಾನಾಗೆ ಭೇಟಿ ನೀಡುತ್ತಿದ್ದಾರೆ. ಇದರೊಂದಿಗೆ 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!