ಬಿಪಿಎಲ್ ಗ್ರೂಪ್ ಅಧ್ಯಕ್ಷ ಟಿಪಿಜಿ ನಂಬಿಯಾರ್ ನಿಧನ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ನ್ಯೂಸ್ ಆ್ಯರೋ: ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿ ಬಿಪಿಎಲ್ ಗ್ರೂಪ್ನ ಅಧ್ಯಕ್ಷ ಟಿಪಿಜಿ ನಂಬಿಯಾರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂತಾಪ ಸೂಚಿಸಿದ್ದಾರೆ. ಅವರನ್ನು ಆವಿಷ್ಕಾರ ಪ್ರವರ್ತಕ ಮತ್ತು ಕೈಗಾರಿಕೋದ್ಯಮಿ ಎಂದು ಬಣ್ಣಿಸಿರುವ ಮೋದಿ, ಭಾರತವನ್ನು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ನಿರ್ಮಿಸುವಲ್ಲಿ ನಂಬಿಯಾರ್ ಮಹತ್ವದ ಕೊಡುಗೆ ನೀಡಿರುವುದಾಗಿ ಸ್ಮರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಟಿಪಿಜಿ ನಂಬಿಯಾರ್ ಆವಿಷ್ಕಾರ ಪ್ರವರ್ತಕ ಮತ್ತು ಕೈಗಾರಿಕೋದ್ಯಮಿಯಾಗಿದ್ದರು. ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸುವ ಪ್ರಬಲ ಉದ್ಯಮಿಯಾಗಿದ್ದ ಅವರ ನಿಧನದಿಂದ ನೋವಾಗಿದೆ ಎಂದು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಟಿಪಿಜಿ ಎಂದು ಕರೆಯಲಾಗುತ್ತಿದ್ದ TPG ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಮಾವ ಕೂಡ ಆಗಿದ್ದಾರೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೀವ್ ಚಂದ್ರಶೇಖರ್ ತಮ್ಮ ಚುನಾವಣಾ ಪ್ರಚಾರವನ್ನು ಕೈಬಿಟ್ಟು, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಮಾವನ ನಿಧನದ ಸುದ್ದಿಯನ್ನು ಹಂಚಿಕೊಂಡಿದ್ದರು.
“ನನ್ನ ಮಾವ ಟಿಪಿಜಿ ನಂಬಿಯಾರ್ ನಿಜವಾದ ದೂರದೃಷ್ಟಿಯುಳ್ಳವರಾಗಿದ್ದರು ಮತ್ತು ಭಾರತದ ಅತ್ಯಂತ ವಿಶ್ವಾಸಾರ್ಹವಾದ ಗ್ರಾಹಕ ಬ್ರ್ಯಾಂಡ್ ವೊಂದನ್ನು ಬೆಳೆಸಿದ್ದರು. ಅದು ಇಂದಿಗೂ ಜನಪ್ರಿಯವಾಗಿದೆ. BelieveInTheBest. ನನ್ನ ಚುನಾವಣಾ ಪ್ರಚಾರ ಕಾರ್ಯವನ್ನು ಕೈಬಿಟ್ಟು ಕುಟುಂಬದೊಂದಿಗೆ ಇರಲು ಬೆಂಗಳೂರಿಗೆ ಹಿಂತಿರುಗುತ್ತಿದ್ದೇನೆ” ಎಂದು ಚಂದ್ರಶೇಖರ್ ಟ್ವೀಟ್ ಮಾಡಿದ್ದರು.
Leave a Comment