70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ವಿಮೆ ವಿಸ್ತರಣೆ; ಪ್ರಧಾನಿ ಮೋದಿ ಚಾಲನೆ
ನ್ಯೂಸ್ ಆ್ಯರೋ: ದೇಶದ ಬಡ ಕುಟುಂಬಗಳಿಗೆ 5 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನು ಕಲ್ಪಿಸುವ ಆಯುಷ್ಮಾನ್ ಭಾರತ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ವೃದ್ಧರಿಗೂ ವಿಸ್ತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದಾರೆ.
ಹಿಂದುಗಳ ಔಷಧ ದೇವರು ಧನ್ವಂತರಿಯ ಜನ್ಮದಿನ ಹಾಗೂ 9ನೇ ಆಯುರ್ವೇದ ದಿನದಂದೇ ದೇಶದ ವೃದ್ಧರಿಗೆ ಮೋದಿ ಅವರು ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಿದ್ದಾರೆ. ತನ್ಮೂಲಕ, ವಿಮಾ ಸೌಕರ್ಯದಿಂದ ವಂಚಿತರಾಗಿದ್ದ ಬಹುತೇಕ ಜನರಿಗೆ ರಕ್ಷಣೆ ಒದಗಿಸಿದ್ದಾರೆ.
ಇದೇ ವೇಳೆ, 12850 ಕೋಟಿ ರು. ವೆಚ್ಚದ ಆರೋಗ್ಯ ಮೂಲಸೌಕರ್ಯ ಯೋಜನೆಗಳಿಗೂ ಪ್ರಧಾನಿ ಶಂಕುಸ್ಥಾಪನೆ ಅಥವಾ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಹಾಲಿ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯಡಿ 5 ಲಕ್ಷ ರು.ನ ಉಚಿತ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿದೆ.
ಇದನ್ನು ಇದೀಗ 70 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೂ ವಿಸ್ತರಿಸಲಾಗಿದೆ. ಈ ಯೋಜನೆ ವಿಶೇಷವೆಂದರೆ ಈ ಯೋಜನೆಗೆ ಸೇರ್ಪಡೆಯಾಗಲು ಯಾವುದೇ ಆದಾಯ ಮಿತಿ ಇಲ್ಲ. ಕುಟುಂಬದ ಸಮೂಹ ಆರೋಗ್ಯ ವಿಮೆ ಹೊರತಾಗಿ 6 ಕೋಟಿ ಹಿರಿಯ ನಾಗರಿಕರಿಗೆ ಪ್ರತ್ಯೇಕ 5 ಲಕ್ಷ ರು. ವಿಮಾ ಸೌಲಭ್ಯ ಇದರಿಂದ ಸಿಗಲಿದೆ.
ಇನ್ನು ರ್ಭಿಣಿಯರು ಹಾಗೂ ನವಜಾತ ಶಿಶುಗಳ ಲಸಿಕಾಕರಣ ಪ್ರಕ್ರಿಯೆಯನ್ನು ಡಿಜಿಟಲೀಕಣಗೊಳಿಸುವ ಯು-ವಿನ್ ಪೋರ್ಟಲ್ ಅನ್ನು ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಗರ್ಭಿಣಿಯರು ಹಾಗೂ ಮಕ್ಕಳು (ಜನನದಿಂದ 16 ವರ್ಷದವರೆಗೆ) ಜೀವರಕ್ಷಕ ಲಸಿಕೆಗಳನ್ನು ಸಕಾಲದಲ್ಲಿ ಪಡೆಯಲು ನೆರವಾಗಲಿದೆ. ಮತ್ತೊಂದೆಡೆ, ಆರೋಗ್ಯ ವೃತ್ತಿಪರರು ಹಾಗೂ ಆ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಿಗಾಗಿ ಪೋರ್ಟಲ್‌ವೊಂದನ್ನು ಉದ್ಘಾಟಿಸಿದ್ದಾರೆ. ದೇಶದಲ್ಲಿರುವ ಆರೋಗ್ಯ ವೃತ್ತಿಪರರು ಹಾಗೂ ಸಂಸ್ಥೆಗಳ ಕೇಂದ್ರೀಯ ದತ್ತಾಂಶ ಕೇಂದ್ರವಾಗಿ ಈ ವೆಬ್‌ಸೈಟ್ ಕಾರ್ಯನಿರ್ವಹಿಸಲಿದೆ.
Leave a Comment