ಮಠ, ದೇವಾಲಯಗಳ ಆಸ್ತೀಲೂ ವಕ್ಫ್‌ ಹೆಸರು; ಸೋಮೇಶ್ವರ, ಬೀರೇಶ್ವರ ದೇಗುಲಕ್ಕೂ ಸಂಕಷ್ಟ

waqf name
Spread the love

ನ್ಯೂಸ್ ಆ್ಯರೋ: ವಿಜಯಪುರ ಜಿಲ್ಲೆ ಸಿಂದಗಿಯ ವಿರಕ್ತಮಠದ 1.20 ಎಕರೆ ಭೂಮಿ ವಕ್ಫ್‌ ಬೋರ್ಡ್ ಹೆಸರಿಗೆ ಸೇರಿರುವ ವಿಚಾರ ಬೆಳಕಿಗೆ ಬಂದಿದೆ. ಇದೇ ವೇಳೆ, ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದಲ್ಲಿರುವ ಚಾಲುಕ್ಯರ ಕಾಲದ ಸೋಮೇಶ್ವರ ದೇವಸ್ಥಾನಕ್ಕೆ ವಕ್ಫ್‌ ಮಂಡಳಿ ಈ ಆಸ್ತಿ ತಮ್ಮದು ಎಂದು ನೋಟಿಸ್‌ ನೀಡಿದೆ. ದೇಗುಲಕ್ಕೆ 1.13 ಎಕರೆ ಜಾಗವಿದೆ. ಇನ್ನು, ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸಾವಳೇಶ್ವರ ದೇವಸ್ಥಾನದ ಕುರುಬ ಸಮಾಜದ ಬೀರದೇವರ ಗುಡಿಯ ಪಹಣಿಯಲ್ಲೂ ಇದು ವಕ್ಫ್‌ ಆಸ್ತಿ ಎಂದು ನಮೂದಾಗಿದೆ.

ವಕ್ಫ್‌ ಆಸ್ತಿಗೆ ಆಗಿರುವ ಒತ್ತುವರಿಯನ್ನು ತೆರವುಗೊಳಿಸಬೇಕು. ಜೊತೆಗೆ ಇಂದೀಕರಣ ಪೂರ್ಣಗೊಳಿಸಬೇಕೆಂದು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರು ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್‌ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದಲೂ ಪ್ರತಿ ವರ್ಷ ಇಂದೀಕರಣ ಆಗುತ್ತಾ ಬಂದಿದೆ. ಕೆಲವು ಕಡೆ ನೋಟಿಸ್ ನೀಡದೆ ಇಂದೀಕರಣ ಆಗಿರುವ ಪ್ರಕರಣಗಳು ಸಹ ಇವೆ. ಈಗ ಬಹಳಷ್ಟು ಪ್ರಕರಣಗಳು ಕಂದಾಯ ಇಲಾಖೆಗೆ ಬಂದು ಭೂ ನ್ಯಾಯ ಮಂಡಳಿಯಿಂದ ನಮಗೆ ವಕ್ಫ್‌ ಆಸ್ತಿ ಬಂದಿದೆ ಎಂದು ಮೇಲ್ಮನವಿ ಬರುತ್ತವೆ. ಅದಕ್ಕೆ ಭೂ ನ್ಯಾಯ ಮಂಡಳಿಯಿಂದ ಬಂದಿರುವ ದಾಖಲೆಗಳಿವೆ.

ಇನ್ನು ಕೆಲವು ಮೊದಲಿನಿಂದಲೂ ರೈತರ ಸ್ವಾಧೀನದಲ್ಲೇ ಇರುವ ಕುರಿತು ಕಂಡುಬರುತ್ತವೆ. ಈಗ ಸತ್ಯಾಂಶವನ್ನು ತಿಳಿಯಲು 124 ಆಸ್ತಿಗಳಿಗೆ ಸಂಬಂಧಿಸಿದಂತೆ 433 ರೈತರು, ಕೆಲವು ವ್ಯಕ್ತಿಗಳಿಗೆ ತಿಳುವಳಿಕೆ ನೋಟಿಸ್ ನೀಡಲಾಗಿದೆ. ಗೆಜೆಟ್‌ನಲ್ಲಿ ವಕ್ಫ್‌ ಆಸ್ತಿ ಎಂದು ಆಗಿರುವ ಕುರಿತು ದಾಖಲೆ ನೀಡಬೇಕು ಎಂದು ವಕ್ಫ್‌ ಅಧಿಕಾರಿಗಳಿಗೂ ಹಾಗೂ ತಮ್ಮ ಜಮೀನು ಎಂಬುದಕ್ಕೆ ದಾಖಲೆ ಒದಗಿಸಬೇಕು ಎಂದು ರೈತರಿಗೂ ನೋಟಿಸ್ ಕೊಡಲಾಗಿದೆ ಎಂದು ಹೇಳಿದರು.

ಇದರಲ್ಲಿ 44 ಆಸ್ತಿಗಳಲ್ಲಿ ಕಾಲಂ 11ರಲ್ಲಿ ನೋಂದಣಿಯಾಗಿದ್ದು, ಅವುಗಳು ತಕ್ಷಣವೇ ಹಕ್ಕು ಬದಲಾವಣೆ ಆಗುವುದಿಲ್ಲ. ಆದಾಗಿಯೂ ನೋಟಿಸ್‌ ಕೊಡದೆ 41 ಪಹಣಿಯಲ್ಲಿ ಕರ್ನಾಟಕ ವಕ್ಫ್‌ ಬೋರ್ಡ್ ಇಂದೀಕರಣ ಮಾಡಲಾಗಿತ್ತು. ತಕ್ಷಣವೇ ನಾವು ರೈತರಿಂದ ಮೇಲ್ಮನವಿ ಪಡೆದು ಕಾಲಂ 11ರಲ್ಲಿ ಇಂದೀಕರಣ ಆಗಿರುವುದನ್ನು ತೆಗೆದು ಹಾಕಿದ್ದೇವೆ. ಅವರ ಪಹಣಿಯಲ್ಲಿ ಕಾಲಂ 11ರಲ್ಲಿ ಕರ್ನಾಟಕ ವಕ್ಫ್‌ ಬೋರ್ಡ್ ಎಂದು ಇಲ್ಲ ಎಂದು ತಿಳಿಸಿದರು.

Leave a Comment

Leave a Reply

Your email address will not be published. Required fields are marked *

error: Content is protected !!