ಕಾನೂನುಬಾಹಿರ ಹೆಡ್ ಕಿಕ್; ರಷ್ಯಾ ಬಾಕ್ಸರ್ ಗೆ ಜೀವಿತಾವಧಿ ನಿಷೇಧ
ನ್ಯೂಸ್ ಆ್ಯರೋ: ರಷ್ಯಾದ ಬಾಕ್ಸರ್ ಇದ್ರಿಸ್ ಅಬ್ದುರ್ರಶೀದೊವ್ ಅವರಿಗೆ ಜೀವಿತಾವಧಿಯುದ್ದಕ್ಕೂ ವೃತ್ತಿಪರ ಬಾಕ್ಸಿಂಗ್ ಸ್ಪರ್ಧೆಗಳಿಗೆ ನಿಷೇಧ ಹೇರಲಾಗಿದೆ. ಅಕ್ಟೋಬರ್ 20ರಂದು ಥಾಯ್ಲೆಂಡ್ನ ಫುಕೆಟ್ನಲ್ಲಿ ನಡೆದ ವೃತ್ತಿಪರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಎದುರಾಳಿಯ ಮೇಲೆ ನಿಷೇಧಿತ ಹೆಡ್ಕಿಕ್ ಪ್ರಹಾರ ನಡೆಸಿದ ಆರೋಪದಲ್ಲಿ ಇದ್ರಿಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
21 ವರ್ಷದ ಇದ್ರಿಸ್ 4-0 ಗೆಲುವಿನ ದಾಖಲೆ ಹೊಂದಿದ್ದು, ಮಿಶ್ರ ಸಮರ ಕಲೆಯಲ್ಲಿ ಅಜೇಯರಾಗಿಉಳಿದಿದ್ದರು. ಎಂಎಂಎಯಲ್ಲಿ ಎದುರಾಳಿಗಳನ್ನು ಹೊಡೆದುರುಳಿಸುವಲ್ಲಿ ನಿಷ್ಣಾತರಾದ ಅವರು ಬಾಕ್ಸಿಂಗ್ ನಿಯಮಾವಳಿ ಉಲ್ಲಂಘಿಸುವ ಮೂಲಕ ನಿಷೇಧದ ಶಿಕ್ಷೆಗೆ ಒಳಗಾಗಿದ್ದಾರೆ.
ಇರಾನ್ ಬಾಕ್ಸರ್ ಬಘೇರ್ ಫರಾಜಿ ಎದುರಿನ ಬೌಟ್ನ ನಾಲ್ಕನೇ ಸುತ್ತಿನಲ್ಲಿ ಅಬ್ದುರ್ರಶಿದೋವ್ ಸಂಕಷ್ಟಕ್ಕೆ ಸಿಲುಕಿದರು. ಈ ಸಂದರ್ಭದಲ್ಲಿ ಫರಾಜಿಯವರನ್ನು ನೆಲಕ್ಕೆ ಉರುಳಿಸಿದ ರಷ್ಯನ್ ಬಾಕ್ಸರ್, ಎಂಎಂಎ ಶೈಲಿಯಲ್ಲಿ ಹೆಡ್ಕಿಕ್ ನೀಡಿದರು. ಅಧಿಕಾರಿಗಳು ಹಾಗೂ ವೀಕ್ಷಕರು ಈ ಕಾನೂನುಬಾಹಿರ ಕ್ರಮವನ್ನು ಖಂಡಿಸಿದರು.
ಬಳಿಕ ಈ ಪಂದ್ಯದ ವಿಡಿಯೊವನ್ನು ಅಬ್ದುರ್ರಶಿದೋವ್ ಜಾಲತಾಣಗಳಲ್ಲಿ ಹಂಚಿಕೊಂಡದ್ದು, ವ್ಯಾಪಕ ಚರ್ಚೆಗೆ ಕಾರಣವಾಯಿತು. ಈ ಘಟನೆಯಿಂದಾಗಿ ಇವರಿಗೆ ಬಾಕ್ಸಿಂಗ್ನಿಂದ ಜೀವಿತಾವಧಿಯುದ್ದಕ್ಕೂ ನಿಷೇಧ ಹೇರಲಾಗಿದ್ದು, ಹೆಚ್ಚುವರಿ ನಿರ್ಬಂಧಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
Leave a Comment