ಸ್ಟೀರಿಂಗ್ ಇಲ್ಲ, ಚಾಲಕ ಬೇಕಿಲ್ಲ; ಬಂದೇ ಬಿಡ್ತು ಟೆಸ್ಲಾದ ಸೈಬರ್ಕ್ಯಾಬ್
ನ್ಯೂಸ್ ಆ್ಯರೋ: ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ತಯಾರಿಸಿರುವ ರೋಬೋಟ್ಯಾಕ್ಸಿಯನ್ನು ಕೊನೆಗೂ ಅನಾವರಣಗೊಳಿಸಿದೆ. ಅಮೆರಿಕದ ಲಾಸ್ ಏಂಜಲಿಸ್ನಲ್ಲಿರುವ ವಾರ್ನರ್ ಬ್ರೋಸ್ ಸ್ಟುಡಿಯೋ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈಬರ್ ಕ್ಯಾಬ್ ಅನ್ನು ಸಾರ್ವತ್ರಿಕವಾಗಿ ಪ್ರದರ್ಶಿಸಲಾಯಿತು. ಇಲಾನ್ ಮಸ್ಕ್ ಅವರು ಈ ಕ್ಯಾಬ್ನಲ್ಲಿ ಪ್ರಯಾಣ ಕೂಡ ಮಾಡಿ, ರೋಬೋ ಟ್ಯಾಕ್ಸಿಯ ನಿಜ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ.
ಇಲಾನ್ ಮಸ್ಕ್ ನೀಡಿದ ಮಾಹಿತಿ ಪ್ರಕಾರ 2026ರಿಂದ ಸೈಬರ್ಕ್ಯಾಬ್ ಕಾರುಗಳ ತಯಾರಿಕೆ ಆರಂಭವಾಗಲಿದೆ. ಅದರ ಬೆಲೆ 30,000 ಡಾಲರ್ನೊಳಗೆ ಇರಲಿದೆಯಂತೆ. ರುಪಾಯಿಗೆ ಪರಿವರ್ತಿಸಿದರೆ 25 ಲಕ್ಷ ರೂ ಆಗುತ್ತದೆ. ಆದರೆ, ಆಮದು ಸುಂಕ ಇರುವುದರಿಂದ ಇದನ್ನು ಆಮದು ಮಾಡಿಕೊಳ್ಳುವುದಾದರೆ ಭಾರತದಲ್ಲಿ ಇದರ ಬೆಲೆ ಕನಿಷ್ಠ 50 ಲಕ್ಷ ರೂ ಆಗುತ್ತದೆ.
ಸೈಬರ್ ಕ್ಯಾಬ್ ಅಥವಾ ರೋಬೋಟ್ಯಾಕ್ಸಿ ಸ್ವಯಂಚಾಲನೆಯ ವಾಹನವಾಗಿದೆ. ಸದ್ಯ ಈ ಸೈಬರ್ಕ್ಯಾಬ್ನಲ್ಲಿ ಇಬ್ಬರು ಮಾತ್ರ ಕೂರಲು ಸ್ಥಳಾವಕಾಶ ಇದೆ. ಡ್ರೈವರ್ ಬೇಕಾಗಿಲ್ಲ. ಸ್ಟೀರಿಂಗ್ ಆಗಲೀ, ಪೆಡಲ್ ಆಗಲೀ ಇದಕ್ಕೆ ಇರುವುದಿಲ್ಲ. ಎಲ್ಲವೂ ಸ್ವಯಂಚಾಲಿತವೇ ಆಗಿರುತ್ತದೆ. ಮಸ್ಕ್ ಪ್ರಕಾರ ಸಿಟಿ ಬಸ್ಸುಗಳನ್ನು ಚಲಾಯಿಸಲು ಆಗುವ ವೆಚ್ಚ ಒಂದು ಮೈಲಿಗೆ ಒಂದು ಡಾಲರ್. ಆದರೆ, ಸೈಬರ್ಕ್ಯಾಬ್ನ ಆಪರೇಟಿಂಗ್ ವೆಚ್ಚ ಒಂದು ಮೈಲಿಗೆ 20 ಸೆಂಟ್ ಮಾತ್ರವೇ. ಅಂದರೆ, ಬಸ್ಸುಗಳಿಗೆ ಹೋಲಿಸಿದರೆ ಇದರ ಪ್ರಯಾಣ ವೆಚ್ಚ ಶೇ. 20 ಮಾತ್ರವೇ.
ಮನುಷ್ಯರಿಂದ ಚಲಾಯಿತವಾಗುವ ವಾಹನಕ್ಕಿಂತ ಈ ಸ್ವಯಂಚಾಲಿತ ವಾಹನಗಳು 10ರಿಂದ 20 ಪಟ್ಟು ಹೆಚ್ಚು ಸುರಕ್ಷಿತ ಎಂದು ವಾದಿಸಿದ್ದಾರೆ ಇಲಾನ್ ಮಸ್ಕ್. ಅಲ್ಲದೇ ಇದರ ಬೆಲೆ ಮತ್ತು ಕಾರ್ಯಾಚರಣೆ ವೆಚ್ಚವೂ ಕಡಿಮೆಯೇ. ಒಂದು ದಿನದಲ್ಲಿ ದೀರ್ಘಾವಧಿ ಕಾಲ ಕಾರಿನಲ್ಲಿ ಪ್ರಯಾಣಿಸುವ ಅನಿವಾರ್ಯತೆ ಇದ್ದವರು ಆರಾಮವಾಗಿ ಕಾರಿನೊಳಗೆ ತಮಗೆ ಬೇಕಾದ ಕೆಲಸ ಮಾಡಿಕೊಳ್ಳಬಹುದು ಎಂದಿದ್ದಾರೆ.
Leave a Comment