ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಗುಡ್ ನ್ಯೂಸ್; ಇವಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಟಾಟಾ
ನ್ಯೂಸ್ ಆ್ಯರೋ: ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರುಗಳ ಮೇಲೆ ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿವಿಧ ಡಿಸ್ಕೌಂಟ್ ಗಳನ್ನು ಘೋಷಣೆ ಮಾಡಿದೆ. ಪಂಚ್ ಇವಿ ಮತ್ತು ಟಿಯಾಗೋ ಇವಿ ಕಾರುಗಳ ಮೇಲೆ ಆಫರ್ ನೀಡಲಾಗುತ್ತಿದ್ದು, ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಗ್ರೀನ್ ಬೋನಸ್ ಲಭ್ಯವಿವೆ.
ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಇವಿ ಕಾರಿನ ಮೇಲೆ ರೂ. 20 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 6 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದ್ದು, 2023 ಮತ್ತು 2024ರ ಮಾದರಿಗಳ ಮೇಲೆ ಹೊಸ ಆಫರ್ ಗಳು ಲಭ್ಯವಿವೆ. ಹಾಗೆಯೇ ಟಿಯಾಗೋ ಇವಿ ಹ್ಯಾಚ್ ಬ್ಯಾಕ್ ಕಾರಿನ ರೂ. 56 ಸಾವಿರ ತನಕ ಆಫರ್ ನೀಡುತ್ತಿದ್ದು, ಇದರಲ್ಲಿ ಕಾರ್ಪೊರೇಟ್, ಕ್ಯಾಶ್ ಡಿಸ್ಕೌಂಟ್ ಮತ್ತು ಗ್ರೀನ್ ಬೋನಸ್ ಸಿಗಲಿದೆ.
ಇನ್ನು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ಹಬ್ಬದ ಋತುವಿನಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಹೊಸ ಆಫರ್ ನಲ್ಲಿ ಟಿಯಾಗೋ ಇವಿ, ನೆಕ್ಸಾನ್ ಇವಿ ಮತ್ತು ಪಂಚ್ ಇವಿ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಹೊಸ ದರಗಳು ಅಕ್ಟೋಬರ್ 31ರ ತನಕ ಮಾತ್ರ ಅನ್ವಯಿಸಲಿವೆ.
ಹೊಸ ಆಫರ್ ನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಬೆಲೆಯಲ್ಲಿ ರೂ. 3 ಲಕ್ಷದ ತನಕ ಇಳಿಕೆ ಮಾಡಿದ್ದರೆ ಪಂಚ್ ಇವಿ ಕಾರಿನ ಬೆಲೆಯಲ್ಲಿ ರೂ. 1.20 ಲಕ್ಷ ಮತ್ತು ಟಿಯಾಗೋ ಕಾರಿನ ಬೆಲೆಯಲ್ಲಿ ರೂ. 40 ಸಾವಿರದಷ್ಟು ಬೆಲೆ ಇಳಿಕೆ ಮಾಡಿದೆ.
ಬೆಲೆ ಇಳಿಕೆಯ ನಂತರ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 12.49 ಲಕ್ಷದಿಂದ ರೂ. 16.29 ಲಕ್ಷ ನಿಗದಿಪಡಿಸಲಾಗಿದ್ದು, ಆರಂಭಿಕ ಮಾದರಿಯ ಬೆಲೆಯಲ್ಲಿ ರೂ. 2 ಲಕ್ಷದಷ್ಟು ಮತ್ತು ಟಾಪ್ ಎಂಡ್ ಮಾದರಿಯಲ್ಲಿ ರೂ. 3 ಲಕ್ಷದಷ್ಟು ಬೆಲೆ ಇಳಿಕೆಯಾಗಿದೆ. ಪಂಚ್ ಇವಿ ಬೆಲೆಯಲ್ಲಿ ಇಳಿಕೆಯ ನಂತರ ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷದಿಂದ ರೂ. 13.79 ಲಕ್ಷ ಬೆಲೆ ನಿಗದಿ ಮಾಡಲಾಗಿದ್ದು, ಆರಂಭಿಕ ಮಾದರಿಯ ಬೆಲೆಯಲ್ಲಿ ರೂ. 1 ಲಕ್ಷದಷ್ಟು ಮತ್ತು ಟಾಪ್ ಎಂಡ್ ಮಾದರಿಯಲ್ಲಿ ರೂ. 1.20 ಲಕ್ಷದಷ್ಟು ಬೆಲೆ ಇಳಿಕೆ ಮಾಡಿದೆ.
ಹಾಗೆಯೇ ಟಿಯಾಗೋ ಎಲೆಕ್ಟ್ರಿಕ್ ಕಾರು ಬೆಲೆ ಇಳಿಕೆಯ ನಂತರ ರೂ. 7.99 ಲಕ್ಷದಿಂದ ರೂ. 10.99 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಆರಂಭಿಕ ಮಾದರಿಯಲ್ಲಿ ಯಾವುದೇ ಬೆಲೆ ಬದಲಾವಣೆ ಮಾಡದೆ ಟಾಪ್ ಎಂಡ್ ಮಾದರಿಯಲ್ಲಿ ರೂ. 40 ಸಾವಿರದಷ್ಟು ಇಳಿಕೆ ಮಾಡಲಾಗಿದೆ. ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಮತ್ತೊಂದು ಆಕರ್ಷಕ ಆಫರ್ ನೀಡುತ್ತಿದೆ. ನಿಗದಿತ ಅವಧಿಯಲ್ಲಿ ಇವಿ ಕಾರು ಖರೀದಿದಾರರಿಗೆ ದೇಶಾದ್ಯಂತ ಕಾರ್ಯಾಚರಣೆ ತನ್ನ ಟಾಟಾ ಪವರ್ ಇವಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ 6 ತಿಂಗಳು ಕಾಲ ಉಚಿತವಾಗಿ ಚಾರ್ಜ್ ಮಾಡಲು ಅವಕಾಶ ನೀಡುತ್ತಿದೆ.
Leave a Comment