ಮಂಗಳೂರು ಪಿಲಿನಲಿಕೆ ಸಂಭ್ರಮ: ಹುಲಿಕುಣಿತ ವೀಕ್ಷಿಸಿ ಸಂಜಯ್ ದತ್, ಶಿವಂ ದುಬೆ ಏನಂದ್ರು?
ನ್ಯೂಸ್ ಆ್ಯರೋ: ಬಾಲಿವುಡ್ ನಟ ಸಂಜಯ್ ದತ್ ಹಾಗು ಕ್ರಿಕೆಟಿಗ ಶಿವಂ ದುಬೆ ಅವರು ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ‘ಪಿಲಿನಲಿಕೆ’ ಸಂಭ್ರಮದಲ್ಲಿ ಭಾಗಿಯಾಗುವ ಸಲುವಾಗಿ ಕರಾವಳಿಗೆ ಆಗಮಿಸಿದ್ದರು.
ತುಳುನಾಡಿನ ಸಾಂಪ್ರದಾಯಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಹುಲಿ ಕುಣಿತದ 9ನೇ ವರ್ಷದ ‘ಪಿಲಿನಲಿಕೆ’ ಹುಲಿ ವೇಷ ಸ್ಪರ್ಧೆ ಮಂಗಳೂರು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಅ.12ರಂದು ನಡೆಯಿತು ಪಿಲಿನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿವಿ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.
ಪಿಲಿನಲಿಕೆಯಲ್ಲಿ ಈ ಬಾರಿ ಪ್ರತಿಷ್ಠಿತ 11 ತಂಡಗಳು ಭಾಗವಹಿಸಿದ್ದವು. ಪ್ರತಿವರ್ಷದಂತೆ ವಿವಿಧೆಡೆಗಳಿಂದ ಸಹಸ್ರಾರು ಮಂದಿ ವೀಕ್ಷಿಸಿದರು. ‘ಪಿಲಿನಲಿಕೆ’ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಕೂಡ ಉಪಸ್ಥಿತಿ ಇದ್ದರು.”ದೇವಸ್ಥಾನದಲ್ಲಿರುವಾಗ ಮನಸ್ಸಿನಲ್ಲಿ ಎಂತಹ ಸಂಚಲನ ಸೃಷ್ಟಿಯಾಗುತ್ತದೆಯೋ, ಅಂತಹದ್ದೇ ಅನುಭವ ಹುಲಿ ವೇಷ ಕುಣಿತವನ್ನು ನೋಡಿದಾಗಲೂ ಉಂಟಾಯಿತು” ಎಂದು ಕ್ರಿಕೆಟಿಗ ಶಿವಂ ದುಬೆ ಅವರು ಹುಲಿ ವೇಷ ಕುಣಿತವನ್ನು ವೀಕ್ಷಿಸಿದ ಬಳಿಕ ತಮಗಾದ ಅನುಭವವನ್ನು ಬಿಚ್ಚಿಟ್ಟರು.
‘ನಮಸ್ಕಾರ ಕುಡ್ಲ.. ಎಂಚ ಉಲ್ಲರ್’ ಎಂದು ತುಳುವಿನಲ್ಲೇ ಮಾತು ಆರಂಭಿಸಿದ ಅವರು ಹುಲಿ ಕುಣಿತ ವೀಕ್ಷಿಸಿದಾಗ ಆದ ರೋಮಾಂಚನವನ್ನು ಹಂಚಿಕೊಂಡರು. ‘ನಿಜಕ್ಕೂ ಇದು ಪ್ರಭಾವಶಾಹಿ. ಈ ಕಲೆಯ ಬಗ್ಗೆ ನಿಮಗೆ ಇರುವ ತುಡಿತವೂ ಅಷ್ಟೇ ಅದ್ಭುತವಾದುದು. ಇಂತಹ ಅನುಭವ ನನಗೆ ಎಲ್ಲೂ ಸಿಕ್ಕಿಲ್ಲ’ ಎಂದರು. ಇನ್ನು ಪಿಲಿನಲಿಕೆಗೆ ಮೆರುಗು ನೀಡಲು ಹೆಸರಾಂತ ನಟರಾದ ರಿಷಬ್ ಶೆಟ್ಟಿ, ಡಾಲಿ ಧನಂಜಯ್, ರಾಜ್ ಬಿ ಶೆಟ್ಟಿ, ಬಾಲಿವುಡ್ ನಟ ಸಂಜಯ್ ದತ್, ಕ್ರಿಕೆಟ್ ತಾರೆ ಶಿವಂ ದುಬೆ ಅವರನ್ನು ಆಹ್ವಾನಿಸಲಾಗಿತ್ತು.
Leave a Comment